ಬೆಂಗಳೂರು: ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರಿಗೆ ಮುಂಬಡ್ತಿ ನೀಡಿರುವ ಕುರಿತು ಉದ್ಭವಿಸಿರುವ ಲಂಚ ಆರೋಪಗಳನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಸಂಬಂಧ ಸ್ಪಷ್ಟೀಕರಣ ನೀಡಿದ್ದು, ಸ್ನೇಹಮಯಿ ಕೃಷ್ಣ ಅವರ ಆರೋಪಗಳು ಆಧಾರರಹಿತ ಹಾಗೂ ಸುಳ್ಳು ಎಂದು ಹೇಳಿದ್ದಾರೆ.
ಪತ್ರದ ಮೂಲಕ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿಗಳು, ದೂರಿನಲ್ಲಿ ಮಾಡಿರುವ ಆರೋಪಗಳಿಗೆ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಆರೋಪಗಳಿಗೆ ದೃಢವಾದ ಸಾಕ್ಷ್ಯ ಒದಗಿಸಿದಲ್ಲಿ ನಿಯಮಾನುಸಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧ ನಿರಾಧಾರ ಆರೋಪ ಮಾಡುವುದು ಮಾನಹಾನಿಗೆ ಸಮಾನವಾಗುತ್ತದೆ. ಆಧಾರರಹಿತ ಆರೋಪಗಳ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನು ಓದಿ –ಸಾರಿಗೆ ನೌಕರರು ಮುಷ್ಕರ ಕೈಬಿಡಲಿ; ಸರ್ಕಾರದ ಪರಿಸ್ಥಿತಿ ಅರಿತು ಸಹಕರಿಸಿ – ಡಿ.ಕೆ. ಶಿ
ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ನಿಯಮಾನುಸಾರವೇ ಬಡ್ತಿ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.








