“ಸ್ವಾತ್ಮಾರಾಮಂ ನಿಜಾನಂದಂ ಶೋಕ ಮೋಹ ವಿವರ್ಜಿತಂ |
ಸ್ಮರಾಮಿ ಮನಸಾ ನಿತ್ಯಂ ವೇಂಕಟಾಚಲದೇಶಿಕಂ ||”
‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ’ ಎಂಬ ಉಪನಿಷತ್ ಉಕ್ತಿಯಂತೆ ‘ಪರಬ್ರಹ್ಮ ವಸ್ತುವೊಂದೇ ಶಾಶ್ವತ, ಮಿಕ್ಕೆಲ್ಲವೂ ನಶ್ವರ’. ಹುಟ್ಟಿದ್ದೆಲ್ಲಕ್ಕೂ ಮರಣ ಎಂಬುದು ಇದ್ದೇ ಇರುತ್ತದೆ. ಆದಿ ಇರುವುದಕ್ಕೆ ಅಂತ್ಯವಿದ್ದೇ ಇದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ‘ಜಾತಸ್ಯಹಿ ಧ್ರುವೋ ಮೃತ್ಯುಃ | ಧ್ರುವಂ ಜನ್ಮ ಮೃತಸ್ಯಚ ||’ ಹೀಗೆ ಒಂದು ಜೀವಿಗೆ ಹುಟ್ಟು ಸಾವು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಮರು ಹುಟ್ಟುಗಳ ಬವಣೆಗೆ ಸಿಲುಕದೆ, ಜೀವವು ಮುಕ್ತಿ ಪಡೆಯಬೇಕಾದಲ್ಲಿ ಸದ್ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ಅಂತಹ ಸದ್ಗುರು ದೊರೆಯುವುದು ದುರ್ಲಭ. ಪೂರ್ವ ಜನ್ಮ ಸುಕೃತದಿಂದಷ್ಟೇ ಸದ್ಗುರುವಿನ ದರ್ಶನ, ಸೇವೆ, ಸಾಧ್ಯ. ಇಂತಹ ಸದ್ಗುರುವಿನ ಪಾದದಲ್ಲಿ ನಮಗೂ ಆಶ್ರಯವಿದ್ದರೆ, ಅವರ ಕೃಪೆ ನಮಗೂ ದೊರೆತರೆ ನಮ್ಮ ಭಾಗ್ಯ ಎಂದು ಜನರು ಪರಿತಪಿಸುವ ಒಬ್ಬ ಸದ್ಗುರು ಎಂದರೆ ಶ್ರೀ ವೆಂಕಟಾಚಲ ಅವಧೂತರು.
1940ನೇ ಇಸವಿಯ ಮಾರ್ಗಶಿರ ಮಾಸದ ಷಷ್ಠಿಯಂದು ತಿರುಪತಿ ವೆಂಕಟೇಶ್ವರ ಸ್ವಾಮಿಯ ವರಪ್ರಸಾದವಾಗಿ ಜನ್ಮತಾಳಿದ ವೇಂಕಟಾಚಲಯ್ಯನವರು ಮೊದಲಿಗೆ ಸಾಮಾನ್ಯ ಗೃಹಸ್ಥರಂತೆಯೇ ಜೀವನ ನಡೆಸಿದರು. ತಮ್ಮ ತಂದೆ ಮತ್ತು ಸಹೋದರ ಕಾಲವಾದ ನಂತರ ತಮ್ಮ ಅಧ್ಯಾತ್ಮ ಸಾಧನೆಯನ್ನು ತೀವ್ರಗೊಳಿಸಿದರು. ಅವರೇನು ಸ್ವಯಂ ಘೋಷಿತ ಅವಧೂತರಲ್ಲ. ಅವರ ಸಾಧನೆಯನ್ನು ಕಂಡ ಗುರು ಬಂಧುಗಳು ಅವರನ್ನು ಅವಧೂತರೆಂದೇ ಕರೆಯುತ್ತಿದ್ದರು.
ಶಿಷ್ಯರ, ಭಕ್ತರ, ಗುರು ಬಂಧುಗಳ ಪಾಲಿಗೆ ಗುರುನಾಥರಾಗಿದ್ದ ಅವರು ಗೃಹಸ್ಥಾಶ್ರಮದಲ್ಲಿ ಇದ್ದುಕೊಂಡೇ ಅಧ್ಯಾತ್ಮವನ್ನು ಅಳವಡಿಸಿಕೊಂಡ ದೊಡ್ಡ ಸಾಧಕರು. ಸಾಧನೆ ಮಾಡಲು ಹಾಗೂ ತಮ್ಮ ಸಾಧನೆಯನ್ನು ತೀವ್ರಗೊಳಿಸಲು ಗುರುನಾಥರು ಆಯ್ದುಕೊಂಡಿದ್ದು ಬಾಣಾವರದ ಶ್ರೀ ಕೃಷ್ಣ ಯೋಗೇಂದ್ರರ ವೇದಿಕೆ ಮತ್ತು ಅನುಸರಿಸಿದ್ದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠ ಮಹಾಸಂಸ್ಥಾನದ 34ನೇ ಪೀಠಾಧಿಪತಿಗಳಾಗಿದ್ದಂತಹ, ಅವಧೂತ ಚಕ್ರವರ್ತಿ ಎಂದೇ ಹೆಸರಾಗಿದ್ದಂತಹ ಜಗದ್ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಧ್ಯಾನ ಮಾರ್ಗ. ಚಿಕ್ಕಂದಿನಲ್ಲಿಯೇ ಶ್ರೀ ಶ್ರೀ ಶಂಕರ ಲಿಂಗ ಭಗವಾನರ ಆಶೀರ್ವಾದ ಪಡೆದಿದ್ದ ಗುರುನಾಥರು ಪರೋಪಕಾರಕ್ಕಾಗಿಯೇ, ಜನಗಳ ಉದ್ಧಾರಕ್ಕಾಗಿಯೇ ಜನ್ಮ ತಾಳಿದ್ದ ಮಹಾನ್ ಚೈತನ್ಯವೆಂದರೆ ಉತ್ಪ್ರೇಕ್ಷೆಯಲ್ಲ.
ಅವರು ಏನನ್ನು ಹೇಳುತ್ತಿದ್ದರೋ ಅದನ್ನು ನಡೆದು ತೋರಿಸುತ್ತಿದ್ದರು ಮತ್ತು ಹೇಗೆ ನಡೆಯುತ್ತಿದ್ದರೋ ಅದನ್ನೇ ಎಲ್ಲರಿಗೂ ಮಾರ್ಗದರ್ಶಿಸುತ್ತಿದ್ದರು. ದಿನದಿಂದ ದಿನಕ್ಕೆ ಮನಸ್ಸನ್ನು ಶುದ್ಧಿಗೊಳಿಸಿಕೊಳ್ಳುತ್ತಾ, ಪವಿತ್ರಗೊಳಿಸಿಕೊಳ್ಳುತ್ತಾ ಸಾಧಕರಾದವರು ಅವರು.
ಗುರು ಎಂದರೆ ಯಾರು? ಗುರುಗಳ ಪಾದಪೂಜೆ ಮುಖ್ಯವೋ ಪದಪೂಜೆ ಮುಖ್ಯವೋ? ಒಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯರ ಮಹತ್ವವೇನು? ತಂದೆ ತಾಯಿಯರು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು? ಮಕ್ಕಳು ತಂದೆ ತಾಯಿಗೆ ಹೇಗೆ ಸೇವೆ ಮಾಡಬೇಕು? ಸಂಸ್ಕಾರ ಎಂದರೆ ಏನು? ಬಂಧುಗಳು ಯಾರು? ಹಿರಿಯರೊಡನೆ ಕಿರಿಯರು ಹೇಗೆ ವರ್ತಿಸಬೇಕು? ಕಿರಿಯರೊಡನೆ ಹಿರಿಯರು ಹೇಗೆ ವರ್ತಿಸಬೇಕು? ವಿದ್ಯಾರ್ಥಿಗಳ ಕರ್ತವ್ಯ ಏನು? ಇಂತಹ ಅನೇಕ ವಿಷಯಗಳಲ್ಲಿ ಮತ್ತು ಸಾಮಾನ್ಯರಿಗೆ ಜಟಿಲವೆನಿಸುತ್ತಿದ್ದ ಆಧ್ಯಾತ್ಮಿಕ ವಿಷಯಗಳಲ್ಲಿ ಎಲ್ಲರಿಗೂ ದಾರಿ ದೀಪವಾಗಿದ್ದವರು ಗುರುನಾಥರು.
ಅವರ ಬಳಿ ಜನರು ಸಮಸ್ಯೆಯ ಮೂಟೆಯನ್ನೇ ಹೊತ್ತು ತಂದರೂ, ವಾಪಸಾಗುವಾಗ ಮನಸ್ಸು ಹಗುರಾಗಿ ಹೋಗುತ್ತಿದ್ದುದಂತೂ ನಿಶ್ಚಿತ. ಆರೋಗ್ಯ ಸರಿ ಇಲ್ಲದ ದನಕರುಗಳಿಗೆ ಗುರುನಾಥರ ಕೈಯ ಸ್ಪರ್ಶ ದೊರಕಿದ ಕೂಡಲೇ ಆರೋಗ್ಯವಾಗಿ ಬಿಡುತ್ತಿದ್ದವು. ತಾರ್ಕಿಕವಾಗಿ ಆಲೋಚಿಸಿದರೆ ಎಷ್ಟೋ ವೇಳೆ ಜನಗಳು ತರುತ್ತಿದ್ದ ಸಮಸ್ಯೆಗೂ ಗುರುನಾಥರು ಕೊಡುತ್ತಿದ್ದ ಪರಿಹಾರಕ್ಕೂ ಸಂಬಂಧವೇ ಇರುತ್ತಿರಲಿಲ್ಲ ಎಂದು ಸುತ್ತಲಿನವರಿಗೆ ಮೇಲ್ನೋಟಕ್ಕೆ ತೋರಿದರೂ, ಸಮಸ್ಯೆ ಮಾತ್ರ ನಿವಾರಣೆಯಾಗಿರುತ್ತಿತ್ತು. ಅವಧೂತರಾದ ಗುರುನಾಥರಿಗೆ ಯಾವುದೇ ವ್ಯಕ್ತಿಯನ್ನು ನೋಡಿದ ಕೂಡಲೇ ಅವರ ಪೂರ್ವಾಪರಗಳೆಲ್ಲ ತಿಳಿಯುವ ಜೊತೆಗೆ ಅವರ ಜನ್ಮಾಂತರಗಳ ಬಗ್ಗೆಯೂ ತಿಳಿಯುತ್ತಿತ್ತು ಎಂಬುದಂತೂ ಇವುಗಳಿಂದ ನಿಶ್ಚಿತವಾಗಿ ತಿಳಿಯುತ್ತದೆ.
ಸಮಸ್ಯೆ ಎಂದು ತಮ್ಮಬಳಿಗೆ ಬಂದವರನ್ನು ಬಹುತೇಕ ವೇಳೆ, ಮೊದಲು ಶಾರದಾ ಪರಮೇಶ್ವರಿ ದರ್ಶನ, ಜಗದ್ಗುರುಗಳ ದರ್ಶನ ಮತ್ತು ಗುರುಗಳ ಪಾದಪೂಜೆ ಮಾಡಿಸಿಕೊಂಡು ಬರಲು ಶೃಂಗೇರಿಗೆ ಕಳುಹಿಸುತ್ತಿದ್ದರು. ಗುರುನಾಥರಿಗೆ ಮೂಢನಂಬಿಕೆ ಅನುಸರಿಸುವುದು ಸಹ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ, ತಮ್ಮಲ್ಲಿ ಬಂದವರನ್ನೆಲ್ಲಾ ತಿದ್ದುತ್ತಿದ್ದರು. ಕೈಲಾಗದವರಿಗೆ, ವಯಸ್ಸಾದವರಿಗೆ ಮತ್ತು ಬಡವರಿಗೆ ಸಂದರ್ಭ ದೊರೆತಾಗೆಲ್ಲ ಸಹಾಯ ಮಾಡುತ್ತಿದ್ದರು ಮತ್ತು ಇತರರೂ ಸಹಾಯ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಗುರುನಾಥರ ಬಳಿ ಶ್ರೀಮಂತಿಕೆ ಎಂದಿಗೂ ಕೆಲಸ ಮಾಡಿಲ್ಲ ಆದರೆ ಅವರನ್ನು ನಂಬಿದವರು ಅಮೆರಿಕಾದಲ್ಲಿರಲಿ ದೂರ ಎಂದು ಸಮಸ್ಯೆಯಾಗಿಲ್ಲ. ಅವರ ಕರ್ಮ ಕಳೆದಿದ್ದಲ್ಲಿ, ಸಮಸ್ಯೆಗೆ ಕ್ಷಣಮಾತ್ರದಲ್ಲಿ ಪರಿಹಾರ ದೊರಕಿ ಬಿಡುತ್ತಿತ್ತು.
ಎಷ್ಟೋ ವೇಳೆ ಭವಿಷ್ಯದಲ್ಲಿ ನಡೆಯುವುದನ್ನು ಗುರುನಾಥರು ಮೊದಲೇ ಹೇಳುತ್ತಿದ್ದರೋ ಅಥವಾ ಅವರು ಹೇಳಿದಂತೆ ಭವಿಷ್ಯದಲ್ಲಿ ನಡೆಯುತ್ತಿತ್ತೋ ಎನ್ನಿಸದೇ ಇರುತ್ತಿರಲಿಲ್ಲ.
ಹಲವು ಬಾರಿ ಎರಡು ಮೂರು ದಿನಗಳ ಕಾಲ ಊಟ ತಿಂಡಿಗಳ ಪರಿವೆಯೇ ಇಲ್ಲದೆ ಸಮಾಧಿ ಸ್ಥಿತಿಯಲ್ಲಿಯೇ ಇರುತ್ತಿದ್ದ ಗುರುನಾಥರು ರೋಗದಿಂದ ಬಳಲುತ್ತಿದ್ದವರು ಎಲ್ಲಿಯೋ ದೂರದಲ್ಲಿ ಇದ್ದರೂ ಔಷಧಿಯನ್ನು ತಾವು ಮಾಡಿಕೊಂಡು ಆ ರೋಗಿಯ ತೊಂದರೆಯನ್ನು ಕಳೆದಿದ್ದೂ ಉಂಟು. ಅಷ್ಟರಮಟ್ಟಿಗೆ ಅದ್ವೈತದ ಸಾಧಕರಾಗಿದ್ದವರು ಗುರುನಾಥರು.
ಗುರುನಾಥರ ಸಂಪರ್ಕಕ್ಕೆ ಒಮ್ಮೆ ಬಂದವರು ಅವರು ತೋರಿದ ದಾರಿಯಲ್ಲಿ ಇಂದಿಗೂ ಚಾಚೂ ತಪ್ಪದೇ ನಡೆಯುತ್ತಿರುವುದನ್ನು ಕಾಣುತ್ತೇವೆ. ಗುರುನಾಥರೊಟ್ಟಿಗೇ ಇದ್ದು ಅವರಿಗೆ ಸೇವೆ ಮಾಡಿದ ಅದೃಷ್ಟ ಕೆಲವರದ್ದಾದರೆ, ಅವರನ್ನು ದೂರದಿಂದಲಾದರೂ ನೋಡಿದ ಅದೃಷ್ಟ ಕೆಲವರದ್ದು, ಗುರುನಾಥರ ಬಗ್ಗೆ ಓದಿ, ಕೇಳಿ ತಿಳಿದುಕೊಳ್ಳುವ ಭಾಗ್ಯ ಕೆಲವರದ್ದು.
ಇಂತಹ ಮಹಾನ್ ಚೇತನ ಭೂಮಿಯ ಮೇಲೆ ಪಾಂಚಭೌತಿಕ ಶರೀರದ ಮೂಲಕ ಅವತರಿಸಿದ ಕಾರಣ ಕಾಲನಿಯಮಕ್ಕನುಗುಣವಾಗಿ ಪಂಚಭೂತಗಳಿಗೆ ಹಿಂದಿರುಗಲೇ ಬೇಕಲ್ಲವೇ? ಇಂದಿಗೆ ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಅಂದರೆ 2010ರ ಜುಲೈ 30ರಂದು ಅಂದರೆ ಆಷಾಢ ಮಾಸದ ಕೃಷ್ಣ ಪಂಚಮಿ ದಿನದಂದು ಗುರುನಾಥರು ಭೌತಿಕ ಶರೀರವನ್ನು ತ್ಯಜಿಸಿದರು. ಆದರೆ ಅವರ ಚೈತನ್ಯ, ಶಕ್ತಿಯ ಮೂಲಕ ಯಾವುದೇ ಪರಿಮಿತಿ ಇಲ್ಲದಂತೆ ತಮ್ಮನ್ನು ನಂಬಿದವರನ್ನು ಇಂದಿಗೂ ಕೂಡ ಸಲಹುತ್ತಿರುವ ಮಾತೃ ಹೃದಯಿ ನಮ್ಮ ಗುರುನಾಥರು.

ರಶ್ಮಿ ಮಂಜುನಾಥ ಜೋಯಿಸ್
ಮೈಸೂರು