ಹೊಟ್ಟೆಯ ಆರೋಗ್ಯವು ಉತ್ತಮವಾಗಿದ್ದರೆ ಸಂಪೂರ್ಣ ದೇಹವು ಆರೋಗ್ಯಕಾರಿ ಆಗಿರುವುದು. ನಾವು ತಿನ್ನುವಂತಹ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಿ ಇದರ ಬಳಿಕ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ದೇಹಕ್ಕೆ ನೀಡಿ ಕಲ್ಮಶವನ್ನು ಹೊರಗೆ ಹಾಕುವ ಕೆಲಸವನ್ನು ಜೀರ್ಣಕ್ರಿಯೆ ವ್ಯವಸ್ಥೆಯು ಮಾಡುವುದು. ಇದು ಆರೋಗ್ಯಕಾರಿ ಆಗಿದ್ದರೆ ಆಗ ಖಂಡಿತವಾಗಿಯೂ ಆರೋಗ್ಯ ಲಭ್ಯವಾಗುವುದು. ಹೊಟ್ಟೆಯನ್ನು ಎಲ್ಲಾ ರೀತಿ ಸಮಸ್ಯೆಯಿಂದ ದೂರವಿಡುವುದು ಕೂಡ ನಮ್ಮ ಆಹಾರ ಕ್ರಮದ ಪ್ರಮುಖ ಕಾರ್ಯವಾಗಿದೆ. ಇಂತಹ ಒಂದು ಅದ್ಭುತವಾದ ಕೆಲಸವನ್ನು ಮಾಡುವುದು ನಮ್ಮ ದೇಹದ
ಹೊಟ್ಟೆಯಲ್ಲಿ ಇರುವಂತಹ ಜೀವಂತ ಸೂಕ್ಷ್ಮಜೀವಿಗಳು ಅಥವಾ ಪ್ರೊಬಯೋಟಿಕ್ಸ್ ಗಳು.
ಪ್ರೊಬಯೋಟಿಕ್ಸ್ ಎಂದರೇನು?
ಪ್ರೋಬಯಾಟಿಕ್‌ಗಳು ಎಂದರೆ ಮೂಲತಃ ಜೀವಂತ
ಸೂಕ್ಷ್ಮಜೀವಿಗಳು/ ಬ್ಯಾಕ್ಟೀರಿಯ ಮತ್ತು ಈಸ್ಟ್‌ಗಳು ಆಗಿದ್ದು ಇವು ನಮ್ಮ ದೇಹದ ಕಾರ್ಯನಿರ್ವಹಣೆಗೆ ಮತ್ತು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅನೇಕ ಪ್ರೋಬಯಾಟಿಕ್ಗಳು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ವಾಸಿಸುವ ಬ್ಯಾಕ್ಟೀರಿಯಾವನ್ನು ಹೋಲುತ್ತವೆ. ಇವುಗಳನ್ನು “ಉತ್ತಮ” ಅಥವಾ “ಸ್ನೇಹಿ” ಬ್ಯಾಕ್ಟೀರಿಯಾ ಎಂದು ಕರೆಯಲಾಗುತ್ತದೆ, ಏಕೆಂದರೆ ಅವುಗಳು ನಮ್ಮ ದೇಹಕ್ಕೆ ಸಹಾಯ ಮಾಡುತ್ತವೆ. ಪ್ರೊಬಯೋಟಿಕ್ಸ್ ನಮ್ಮ ದೇಹದಲ್ಲಿನ “ಉತ್ತಮ” ಬ್ಯಾಕ್ಟೀರಿಯಾಗಳ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ಇವುಗಳು ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತವೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.

ಪ್ರೊಬಯೋಟಿಕ್ಸ್ ಎಲ್ಲಿ ಸಿಗುತ್ತವೆ?
ಹುದುಗು ಬರೆಸಿದ ಆಹಾರಗಳು, ಮೊಸರು, ಮಜ್ಜಿಗೆ ಕಿಮ್ಚಿ (ಕೊರಿಯನ್ ಆಹಾರ )ಮತ್ತು ಕೇಫೀರ್‌ನಂತಹ (ಹಾಲಿನ ಆಹಾರ )ಆಹಾರಗಳಲ್ಲಿ ಇವುಗಳು ಸಹಜವಾಗಿ ಕಂಡು ಬರುತ್ತವೆ.
ಹೊಟ್ಟೆಯ ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಬಳಸಬಹುದಾದ ಪ್ರೊಬಯೋಟಿಕ್ ಆಹಾರ ಪದಾರ್ಥಗಳು.
ಹುದುಗು ಬರಿಸಿದ ಆಹಾರ ಸೇವನೆ
ಅತೀ ಆರೋಗ್ಯಕರ ಆಹಾರಗಳಲ್ಲಿ ಹುದುಗು ಬರಿಸಿದ ಆಹಾರ ಕ್ರಮಗಳು (Fermented food) ಕೂಡ ಬಹಳ ಮುಖ್ಯವಾದುದು. ನಾವು ನಾನಾ ಬಗೆಯ ದೋಸೆ ಹಾಗೂ ಇಡ್ಲಿ ಮಾಡುವಾಗ ಹಿಟ್ಟನ್ನು ಹುದುಗು ಬರಿಸುತ್ತೇವೆ.ಈ ಹುದುಗು ಬರಿಸಿರುವ ಹಿಟ್ಟಿನಿಂದ ಮಾಡಿದ ಅಡುಗೆ ರುಚಿ ಸಿಗುವುದು ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ. ಹುದುಗು ಬರಿಸಿದ ಆಹಾರದಲ್ಲಿ ಪ್ರೊಬಯೋಟಿಕ್ ಅಂಶ ಹೆಚ್ಚಾಗಿ ಇರಲಿದ್ದು, ಇದು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರೊಬಯೋಟಿಕ್ ಅಂಶ ಇರುವ ಆಹಾರ ಸೇವಿಸಬೇಕು.
ಉದಾ : ಇಡ್ಲಿ ದೋಸೆ. ಆದರೆ ಸೋಡಿಯಂ ಹೆಚ್ಚು ಇರುವ ಹುದುಗು ಬರಿಸಿದ ಆಹಾರದ ಅತೀಯಾದ ಸೇವನೆ ಅರೋಗ್ಯಕ್ಕೆ ಹಾನಿಕರ.
ಮೊಸರು : ಮೊಸರು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಈ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರ ಸೇವನೆಯು ಕೆರಳಿಸುವ ಕರುಳಿನ ಸಹಲಕ್ಷಣಗಳಿಗೆ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ರಾತ್ರಿ ಅನ್ನವನ್ನು ಮೊಸರಿನೊಂದಿಗೆ ಮಣ್ಣಿನ ಪಾತ್ರೆಯಲ್ಲಿ ಹಾಕಿಟ್ಟು ಬೆಳಗ್ಗೆ ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು.

ಈರುಳ್ಳಿ: ಈರುಳ್ಳಿಯು ಪ್ರಿಬಯಾಟಿಕ್‌ಗಳ ಮತ್ತೊಂದು ಅತ್ಯುತ್ತಮ ಮೂಲವಾಗಿದೆ, ಈರುಳ್ಳಿಯ ಸೇವನೆ ಪ್ರೋಬಯಾಟಿಕ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಕರುಳಿನ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಲಾಡ್‌ಗಳು, ಸೂಪ್‌ಗಳು ಮತ್ತು ಸ್ಟಿರ್-ಫ್ರೈಗಳಿಗೆ ಕಚ್ಚಾ ಅಥವಾ ಬೇಯಿಸಿದ ಈರುಳ್ಳಿ ಸೇರಿಸಿ ತಿನ್ನುವುದು ಬಹಳ ಅರೋಗ್ಯ ಕಾರಿ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಪ್ರಬಲವಾದ ಪ್ರಿಬಯಾಟಿಕ್ ಆಗಿದೆ. ಇದು ಇನ್ಯುಲಿನ್ ಅನ್ನು ಹೊಂದಿರುತ್ತದೆ, ಇದು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುವ ಒಂದು ರೀತಿಯ ಫೈಬರ್. ಹೊಟ್ಟೆಯ ಆರೋಗ್ಯಕ್ಕೆ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ ಆಗಿದೆ. ಇದರಲ್ಲಿ ಕೆಲವೊಂದು ನೈಸರ್ಗಿಕ ಪ್ರೊಬಯೋಟಿಕ್ ಗಳು ಇದ್ದು, ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಹೀರಿಕೊಳ್ಳದ ನಾರಿನಾಂಶವನ್ನು ಹೊಂದಿರುವಂತಹ ಬೆಳ್ಳುಳ್ಳಿಯು ಹೊಟ್ಟೆಯ ಬ್ಯಾಕ್ಟೀರಿಯಾಗೆ ಸಹಕಾರಿ.
ಸೇಬು: ಸೇಬಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ನಾರಿನಾಂಶ, ಆಂಟಿಆಕ್ಸಿಡೆಂಟ್ ಗಳಿದ್ದು, ಇದು ಕ್ಯಾಲರಿ ಕಡಿಮೆ ಮಾಡುವುದು. ಇದರಲ್ಲಿನ ನಾರಿನಾಂಶ ಮತ್ತು ಕಿಣ್ವಗಳು ಜೀರ್ಣಕ್ರಿಯೆ ವೃದ್ಧಿಸುವುದು. ಸಂಕೀರ್ಣ ಆಹಾರವನ್ನು ಇದು ವಿಘಟಿಸಲು ನೆರವಾಗುವುದು.
ಓಟ್ಸ್: ಓಟ್ಸ್ ಬೀಟಾ-ಗ್ಲುಕಾನ್‌ಗಳ ಉತ್ತಮ ಮೂಲವಾಗಿದೆ, ಇದು ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುವ ಒಂದು ರೀತಿಯ ಫೈಬರ್ ಆಗಿದೆ. ನಿಯಮಿತವಾದ ಓಟ್‌ಮೀಲ್‌ನ ಸೇವನೆ ಕರುಳಿನ ಸ್ನೇಹಿ ವರ್ಧಕವಾಗುತ್ತದೆ.
ಶತಾವರಿ: ಶತಾವರಿಯು ಇನ್ಯುಲಿನ್‌ನಲ್ಲಿ ಸಮೃದ್ಧವಾಗಿದೆ, ಇದು ಅಮೂಲ್ಯವಾದ ಪ್ರಿಬಯಾಟಿಕ್ ಆಹಾರವಾಗಿದೆ. ಅದರ ಪ್ರಿಬಯಾಟಿಕ್ ಅಂಶವನ್ನು ಸಂರಕ್ಷಿಸಲು ಶತಾವರಿಯನ್ನು ಸ್ಟೀಮ್ ಅಥವಾ ಹುರಿದು ಸಲಾಡ್‌ಗಳಲ್ಲಿ ಬಳಸಬಹುದು.
ಸಾಂಪ್ರದಾಯಿಕ ಉಪ್ಪಿನಕಾಯಿ : ವಿನೇಗರ್ ಅಥವಾ ಉಪ್ಪಿನೊಂದಿಗೆ ಸೇರಿಸಿ ನೆನೆಸುವುದರಿಂದ ಇದು ಪ್ರೊಬಯೋಟಿಕ್ ಅಂಶ ಹೊಂದಿರುತ್ತದೆ.

ಸಾಂಪ್ರದಾಯಿಕ ಮಜ್ಜಿಗೆ : ಸಾಂಪ್ರದಾಯಿಕ ಮಜ್ಜಿಗೆಯು ಪ್ರೊಬಯೋಟಿಕ್ ಅಂಶ ಹೊಂದಿರುವ ಉತ್ತಮ ಆಹಾರವಾಗಿದೆ.
ಕೆಫಿರ್: ಇದು ಹಾಲಿನ ಪದಾರ್ಥ. ಇದು ಉತ್ತಮ ಪ್ರಯೋಟಿಕ್ ಅಂಶವನ್ನು ಹೊಂದಿರುತ್ತದೆ. ಇದು ಉತ್ತಮ ಗುಣಮಟ್ಟದ ಕ್ಯಾಲಿಟ್ಸಂ ಹಾಗೂ ಪ್ರೊಟೀನ್ ಅನ್ನು ಹೊಂದಿರುತ್ತದೆ.
ಬಾಳೆಹಣ್ಣುಗಳು: ಬಾಳೆಹಣ್ಣುಗಳು ಅನುಕೂಲಕರವಾದ ತಿಂಡಿ ಮಾತ್ರವಲ್ಲ, ಅವು ನಿರೋಧಕ ಪಿಷ್ಟವನ್ನು ಒಳಗೊಂಡಿರುತ್ತವೆ, ಇದು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪ್ರಿಬಯಾಟಿಕ್. ಸ್ವಲ್ಪ ಹಸಿರು ಬಾಳೆಹಣ್ಣುಗಳ ಸೇವನೆಯಿಂದ ಹೆಚ್ಚಿನ ಮಟ್ಟದ ನಿರೋಧಕ ಪಿಷ್ಟವನ್ನು ಪಡೆಯಬಹುದು.
ಆಹಾರ ಪೂರಕಗಳು: ಪ್ರೊಬಯೋಟಿಕ್ಸ್ ಅನ್ನು ಮಾತ್ರೆಗಳು, ಕ್ಯಾಪ್ಸೂಲ್‌ಗಳು ಅಥವಾ ಪುಡಿ ರೂಪದಲ್ಲಿ ಪೂರಕಗಳಾಗಿ ಪಡೆಯಬಹುದು.
ಪ್ರೊಬಯೋಟಿಕ್ಸ್‌ನ ಪ್ರಯೋಜನಗಳು
1)ಜೀರ್ಣಕ್ರಿಯೆಯ ಕಾರ್ಯವನ್ನು ಸುಧಾರಿಸುತ್ತದೆ.
2)ಕೆಲವು ಅತಿಸಾರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
3)”ಹಾನಿಕಾರಕ” ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
4)ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರೊಬಯೋಟಿಕ್ ಇರುವಂತಹ ಆಹಾರಗಳನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ಕರುಳಿನ ಬ್ಯಾಕ್ಟೀರಿಯಾದ ವೈವಿಧ್ಯತೆ ಮತ್ತು ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಒಟ್ಟಾರೆ ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ.

ಸೌಮ್ಯ ಸನತ್.








