ಬೆಂಗಳೂರು, ಆಗಸ್ಟ್ 12: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆ ಮುಂದೆ ಸೆಲ್ಫಿ ತೆಗೆಯಲು ಹೋಗಿ ದಾಳಿಗೆ ಸಿಕ್ಕಿದ್ದ ನಂಜನಗೂಡಿನ ವ್ಯಕ್ತಿಗೆ, ಅರಣ್ಯ ಇಲಾಖೆಯು ₹25,000 ದಂಡ ವಿಧಿಸಿದೆ. ಅರಣ್ಯ ಪ್ರದೇಶ ನಿಯಮ ಉಲ್ಲಂಘಿಸಿ ಅಪಾಯಕಾರಿ ಸಾಹಸ ನಡೆಸಿದ್ದಕ್ಕಾಗಿ, ಆತನಿಂದಲೇ ಜಾಗೃತಿ ವಿಡಿಯೋ ಕೂಡ ಮಾಡಿಸಲಾಗಿದೆ.
ಇತ್ತೀಚೆಗೆ ಬಂಡೀಪುರ ರಸ್ತೆಯಲ್ಲಿ ಕಾಡಾನೆ ಎದುರಾದಾಗ, ವಾಹನಗಳು ದೂರದಲ್ಲಿ ನಿಂತಿದ್ದವು. ಆದರೆ, ಆ ವ್ಯಕ್ತಿ ಆನೆಯ ಹತ್ತಿರ ಹೋಗಿ ಸೆಲ್ಫಿ ತೆಗೆಯಲು ಮುಂದಾದರು. ಇದರಿಂದ ರೊಚ್ಚಿಗೆದ್ದ ಆನೆ ಅಟ್ಟಿಸಿಕೊಂಡು ಬಂದು ದಾಳಿ ಮಾಡಿತು. ಅದೃಷ್ಟವಶಾತ್, ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿ ಪ್ರಾಣಾಪಾಯ ತಪ್ಪಿತು.
ಈ ಘಟನೆಯ ವಿಡಿಯೋ ಅಲ್ಲಿದ್ದ ಹಲವರು ಹಾಗೂ ಕಾರಿನೊಳಗಿದ್ದವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.ವಿಡಿಯೋ ವೈರಲ್ ಆದ ನಂತರ, ಅರಣ್ಯ ಇಲಾಖೆ ಆತನನ್ನು ಪತ್ತೆಹಚ್ಚಿ, ₹25,000 ದಂಡ ವಿಧಿಸಿತು.
ಜೊತೆಗೆ, “ಅರಣ್ಯ ಪ್ರದೇಶದಲ್ಲಿ ಇಂತಹ ದುಸ್ಸಾಹಸಗಳನ್ನು ಯಾರೂ ಮಾಡಬಾರದು” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲು ಆತನಿಂದಲೇ ಜಾಗೃತಿ ವಿಡಿಯೋ ಚಿತ್ರೀಕರಿಸಲಾಯಿತು.ಇದನ್ನು ಓದಿ –ಮೈಸೂರು ಡ್ರಗ್ಸ್ ಫ್ಯಾಕ್ಟರಿ ಪ್ರಕರಣ: NDPS ಕಾಯ್ದೆಯಡಿ 6 ಪ್ರಕರಣ ದಾಖಲೆ
ಅರಣ್ಯ ಇಲಾಖೆ, ಕಾಡಿನ ಒಳಗೆ ಅಥವಾ ಅರಣ್ಯ ರಸ್ತೆಗಳ ಮೇಲೆ ಇಳಿದು ಕಾಡುಪ್ರಾಣಿಗಳಿಗೆ ಹತ್ತಿರ ಹೋಗುವಂತಹ ಅಪಾಯಕಾರಿ ಕೃತ್ಯಗಳಿಂದ ದೂರವಿರಲು ಸಾರ್ವಜನಿಕರಿಗೆ ಮನವಿ ಮಾಡಿದೆ.