ಮೈಸೂರು,ಜು.13- ‘ಸ್ಟಾರ್ ಆಫ್ ಮೈಸೂರು’ ಮತ್ತು ‘ಮೈಸೂರು ಮಿತ್ರ’ ಪತ್ರಿಕೆಗಳ ಸ್ಥಾಪಕ-ಸಂಪಾದಕ ಡಾ.ಕೆ.ಬಿ. ಗಣಪತಿ(85) ಇಂದು ಬೆಳಿಗ್ಗೆ ನಗರದಲ್ಲಿ ನಿಧನರಾದರು.
ಪತ್ನಿ ರಾಲಿ ಗಣಪತಿ, ಪುತ್ರರಾದ ವಿಕ್ರಮ್ ಮುತ್ತಣ್ಣ ಮತ್ತು ಮಿಕ್ಕಿ ಬೋಪಣ್ಣ, ಸೊಸೆಯಂದಿರು, ಮೊಮ್ಮಕ್ಕಳರನ್ನು ಅಗಲಿದ್ದಾರೆ.
ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ವಕೀಲಿಕೆಯಿಂದ ವರದಿಗಾರಿಕೆ- ಬಾಂಬೆಯಿಂದ ಮೈಸೂರಿಗೆ. ಕೆ.ಬಿ.ಗಣಪತಿ ರೋಚಕ ಪಯಣ ಸ್ಮರಿಸಬಹುದಾಗಿದೆ.
ಮೈಸೂರಿನಲ್ಲಿ ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಿಸಿ ಯಶಸ್ಸು ಗಳಿಸಿದ ಸಾಧಕರಾಗಿದ್ದರು. ಕೊಡಗು ಜಿಲ್ಲೆಯಲ್ಲಿ ಜನಿಸಿದರು. ಬಿ.ಎ.(ಕಲೆ), ಬಿ.ಎಲ್.(ಕಾನೂನು), ಮುಂಬೈನಲ್ಲಿ ಪತ್ರಿಕೋದ್ಯನದಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿದ್ದರು. 1961–1965ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್, ಸಿವಿಲ್ ಕೋರ್ಟ್‌ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ಬಳಿಕ ಫ್ರೀಪ್ರೆಸ್ ಜರ್ನಲ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸಿ, 1978ರಲ್ಲಿ ಸ್ಟಾರ್ ಆಫ್ ಮೈಸೂರು ಸ್ಥಾಪನೆಸಿದರು. ಆದರ್ಶವಾದಿ, ಅಮೆರಿಕಾ- ಆನ್ ಏರಿಯಾ ಆಫ್ ಲೈಟ್ ಇನ್ ಇಂಗ್ಲಿಷ್, ದಿ ಕ್ರಾಸ್ ಆ್ಯಂಡ್ ಕೂರ್ಗ್ಸ್, ಆಬ್ರಕದಬ್ರ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿರುವ ಕೀರ್ತಿ ಇವರದ್ದಾಗಿದೆ. ಇವರಿಗೆ ವಿವಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.