ಅಮರಾವತಿ, ಏಪ್ರಿಲ್ 30: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ದುರಂತದಲ್ಲಿ ದೇವಾಲಯದ ಗೋಡೆ ಕುಸಿದು ಕನಿಷ್ಠ 8 ಮಂದಿ ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರ್ಘಟನೆ ವಿಶಾಖಪಟ್ಟಣಂನ ಪ್ರಸಿದ್ಧ ಸಿಂಹಾಚಲಂ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಈ ದೇವಾಲಯದಲ್ಲಿ ಪ್ರತಿವರ್ಷ ಏಪ್ರಿಲ್ 30ರಂದು ನಡೆಯುವ ಚಂದನೋತ್ಸವದ ಸಂದರ್ಭದಲ್ಲಿ ಭಕ್ತರ ಭಾರೀ ಕೂಟ ಇರುತ್ತದೆ. ಈ ಬಾರಿ ಸಹ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಈ ದುರಂತ ಸಂಭವಿಸಿದೆ.
ದುರಂತದ ಹಿನ್ನೆಲೆ:
ಚಂದನೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನೂ, ಹೊಸ ಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಸಿಂಹಾಚಲಂನ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣು ಸಡಿಲಾಗಿ, ಆ ಹೊಸ ಗೋಡೆ ಕುಸಿದಿದೆ. ಈ ಗೋಡೆಯ ಪಕ್ಕದಲ್ಲಿ ನಿಂತಿದ್ದ ಭಕ್ತರು ಭೂಕುಸಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ರಕ್ಷಣಾ ಕಾರ್ಯಾಚರಣೆ:
ಘಟನೆ ಸಂಭವಿಸಿದ ತಕ್ಷಣವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) , ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) , ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಗಾಯಗೊಂಡ ಭಕ್ತರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇದನ್ನು ಓದಿ –ಗೃಹಲಕ್ಷ್ಮೀ ಯೋಜನೆ : ಜನವರಿಯಿಂದ ಬಾಕಿಯಿರುವ ಮೂರು ತಿಂಗಳ ಹಣವನ್ನು ಮೇನಲ್ಲಿ ಬಿಡುಗಡೆ
ವರ್ಷದ ಪ್ರಮುಖ ಉತ್ಸವ:
ಚಂದನೋತ್ಸವದ ಸಂದರ್ಭದಲ್ಲಿ ಭಕ್ತರು ಶ್ರೀಗಂಧದ ಲೇಪದಲ್ಲಿ ಮುಚ್ಚಿರುವ ನರಸಿಂಹ ಸ್ವಾಮಿಯನ್ನು ದರ್ಶನ ಪಡೆಯುವ ಅಪರೂಪದ ಅವಕಾಶ ಪಡೆಯುತ್ತಾರೆ. ಈ ಕಾರಣದಿಂದ ಸಾವಿರಾರು ಭಕ್ತರು ಶ್ರೀಮಂದಿರಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಕೂಡ ಮುಂಜಾನೆಯಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ದರ್ಶನಕ್ಕಾಗಿ ನಿಂತಿದ್ದರು.