— ಅಶೋಕ್ ಆಕ್ರೋಶ
- ಮೊದಲು ರಸ್ತೆ ಗುಂಡಿ ಮುಚ್ಚಿ, ನಂತರ ಟನಲ್ ಯೋಜನೆ ಮಾಡಲಿ”
ಬೆಂಗಳೂರು: “ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳಿಂದ ನಗರದ ಗೌರವ ಹರಾಜಾಗಿದೆ. ಮೊದಲು ಅವುಗಳನ್ನು ಮುಚ್ಚಿ, ನಂತರ ಬೇಕಾದರೆ ಚಂದ್ರಲೋಕಕ್ಕೆ ಟನಲ್ ನಿರ್ಮಾಣ ಮಾಡಿ” ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಲಾಲ್‌ಬಾಗ್‌ನಲ್ಲಿ ಟನಲ್ ಯೋಜನೆಗೆ ವಿರೋಧವಾಗಿ ಸಾರ್ವಜನಿಕರು, ಸಂಘಟನೆಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಸರ್ಕಾರ ಟನಲ್ ನಿರ್ಮಾಣದ ಮಾತು ಮಾತನಾಡುತ್ತಿದೆ. ಒಮ್ಮೆ ವಿಶ್ವವೇ ಮೆಚ್ಚಿದ ಬೆಂಗಳೂರು ಇಂದು ಉದ್ಯಮಿಗಳಿಗೆ ಬೇಸರದ ಸ್ಥಳವಾಗಿದೆ — ಇದು ಕಾಂಗ್ರೆಸ್ ಸರ್ಕಾರದ ವಿಫಲತೆಯ ಸಾಬೀತು” ಎಂದು ಟೀಕಿಸಿದರು.
“ಮುಖ್ಯಮಂತ್ರಿ ಅಕ್ಟೋಬರ್ 30ರೊಳಗೆ ಗುಂಡಿ ಮುಚ್ಚುವಂತೆ ಆದೇಶಿಸಿದ್ದರು. ಆದರೆ ಡೆಡ್‌ಲೈನ್ ಮುಗಿದರೂ ಅಪಘಾತಗಳು ಮಾತ್ರ ನಡೆಯುತ್ತಿವೆ. ಇದಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.
ಅಶೋಕ್ ಮುಂದುವರಿದು, “ಸಸ್ಯಕಾಶಿಗೆ ಸರ್ಕಾರವೇ ಗುಂಡಿ ತೋಡುತ್ತಿದೆ. ಟನಲ್ ಯೋಜನೆ ಬೆಂಗಳೂರಿನ ಪರಿಸರಕ್ಕೆ ಮಾರಕ. ಇದು ಸಾಮಾನ್ಯರ ರಸ್ತೆ ಅಲ್ಲ — ವಿಐಪಿ ಕಾರಿಡಾರ್. ಕಾರುಗಳಿಗೆ ಮಾತ್ರ ಪ್ರವೇಶ, ಬಡವರ ಬೈಕ್, ಸೈಕಲ್‌ಗೆ ಇಲ್ಲ. ಹೀಗಾಗಿ ಈ ಯೋಜನೆ ಸಂಪೂರ್ಣ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“8 ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪಾವತಿ ಮಾಡಬೇಕಿದೆ. ಸಾಲ ಮಾಡಿ ಯೋಜನೆ ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗುತ್ತದೆ” ಎಂದರು.
ಅವರು ಮುಂದುವರಿದು, “ಬೆಂಗಳೂರು ಕೆಂಪೇಗೌಡರ ಕೊಡುಗೆ. ಇಲ್ಲಿ 3000 ದಶಲಕ್ಷ ವರ್ಷದ ಶಿಲೆಗಳಿವೆ. ಅದೇ ಶಿಲೆಯ ಮೇಲೆ ನಗರ ನಿರ್ಮಾಣವಾಗಿದೆ. ಈಗ ಪಾರ್ಕ್, ಕೆರೆಗಳ ಮೇಲೂ ಕಣ್ಣಿಟ್ಟಿದ್ದಾರೆ — ಇದು ಮನೆ ಹಾಳು ಮಾಡುವ ಕೆಲಸ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇದನ್ನು ಓದಿ –ನ.19ರಂದು ‘ಅಕ್ಕ’ ಪಡೆಗೆ ಚಾಲನೆ — ಲಕ್ಷ್ಮಿ ಹೆಬ್ಬಾಳ್ಕರ್
ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಧಮ್ಕಿ ಹಾಕುವುದು ಅವರಿಗೆ ರಕ್ತಗತ. ಮೊದಲು ಶಾಸಕ ರಾಮಮೂರ್ತಿ, ನಂತರ ತೇಜಸ್ವಿ ಸೂರ್ಯ, ಉದ್ಯಮಿಗಳಾದ ಮೋಹನ್‌ದಾಸ್ ಪೈ, ಕಿರಣ್ ಮಜುಂದಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಇದು ಕನಕಪುರದ ಬಂಡೆ ಅಲ್ಲ, ಬೆಂಗಳೂರಿನ ಬಂಡೆ!” ಎಂದು ತಿರುಗೇಟು ನೀಡಿದರು.








