ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರದ ಪುಣ್ಯ ಸಂದರ್ಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಅದ್ಧೂರಿ ಭಕ್ತಿ ಸಂಭ್ರಮದ ದೃಶ್ಯಗಳು ಕಂಡುಬಂದಿವೆ. ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಭಕ್ತರು ಇಂದು ಗಜಲಕ್ಷ್ಮಿ ಮತ್ತು ನಾಗಲಕ್ಷ್ಮಿ ಅಲಂಕಾರದಲ್ಲಿ ದರ್ಶನ ಮಾಡಿ ಪುಣ್ಯಸಂಚಯ ಮಾಡಿಕೊಂಡಿದ್ದಾರೆ.
ಈ ವಿಶೇಷ ದಿನದ ಪ್ರಯುಕ್ತ ದೇವಸ್ಥಾನದ ಒಳಾಂಗಣವನ್ನು ಕಮಲದ ಹೂಗಳಿಂದ ಅಲಂಕರಿಸಲಾಗಿದ್ದು, ತಾಯಿ ದೇವಿಯ ಅಲಂಕಾರ ಭಕ್ತರಲ್ಲಿ ಭಕ್ತಿಭಾವದ ತೀವ್ರತೆಯನ್ನು ಹೆಚ್ಚಿಸಿದೆ. ಮಂಗಳಕರ ದರ್ಶನಕ್ಕಾಗಿ ಮುಂಜಾನೆ 5 ಗಂಟೆಯಿಂದಲೇ ಸಾವಿರಾರು ಭಕ್ತರು ಮೆಟ್ಟಿಲು ಮಾರ್ಗದಿಂದ ಚಾಮುಂಡಿ ಬೆಟ್ಟ ಹತ್ತಿ ತಾಯಿ ದರ್ಶನ ಪಡೆಯುತ್ತಿದ್ದಾರೆ.
ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನವನ್ನು ಕಲ್ಪಿಸುವ ನಿಟ್ಟಿನಲ್ಲಿ ಜುಲೈ 10ರ ಗುರುವಾರ ರಾತ್ರಿದಿಂದ ಚಾಮುಂಡಿ ಬೆಟ್ಟಕ್ಕೆ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ. ಬೆಳಿಗ್ಗೆ 5ರಿಂದ ಸಂಜೆ 6ರವರೆಗೆ ಮಾತ್ರ ಮೆಟ್ಟಿಲು ಮಾರ್ಗವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ.
ಇದೇ ವೇಳೆ, ಲಲಿತ ಮಹಲ್ ಪಾರ್ಕಿಂಗ್‌ನಿಂದ ಚಾಮುಂಡಿ ಬೆಟ್ಟದವರೆಗೆ ಉಚಿತ ಬಸ್ ಸೇವೆಯನ್ನು ಮೈಸೂರು ನಗರ ಸಂಚಾರ ಪೊಲೀಸರು ನೀಡಿದ್ದು, ಇದು ಇಂದು ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೆ ಲಭ್ಯವಿದೆ.ಇದನ್ನು ಓದಿ –ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ಸೇವೆ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರ ಭಕ್ತಿ, ಉತ್ಸಾಹ, ಭದ್ರತಾ ಕ್ರಮಗಳು ಹಾಗೂ ಉಚಿತ ಸೇವೆಗಳೊಡನೆ ಮೂರನೇ ಆಷಾಢ ಶುಕ್ರವಾರದ ಪಾವನ ದಿನ ಮೈಸೂರಿನಲ್ಲಿ ವಿಶೇಷ ಧಾರ್ಮಿಕ ವೈಭವದಿಂದ ಕಂಗೊಳಿಸುತ್ತಿದೆ.