ಮೈಸೂರು: ಮೈಸೂರಿನ ಸರಗೂರು ತಾಲೂಕಿನಲ್ಲಿ ಹುಲಿ ದಾಳಿಯಿಂದ ಮತ್ತೋರ್ವ ವ್ಯಕ್ತಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಕಳೆದ 15 ದಿನಗಳಲ್ಲಿ ಇದೇ ಮೂರನೇ ಹುಲಿ ದಾಳಿ ಪ್ರಕರಣ ಇದಾಗಿದೆ.
ಘಟನೆ ಕುರ್ಣೇಗಾಲದ ಕೂಡಗಿ ಗ್ರಾಮದಲ್ಲಿ ಸಂಭವಿಸಿದ್ದು, ಸ್ಥಳೀಯ ರೈತನಾದ ನಿಂಗಯ್ಯ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪೊಲೀಸರು ಮತ್ತು ಅರಣ್ಯ ಇಲಾಖೆಯ ಪ್ರಾಥಮಿಕ ವರದಿ ಪ್ರಕಾರ, ನಿಂಗಯ್ಯ ತಮ್ಮ ಜಮೀನಿನ ಹತ್ತಿರದ ಕಾಡಂಚಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿ ಅಚಾನಕವಾಗಿ ದಾಳಿ ನಡೆಸಿ ಸ್ಥಳದಲ್ಲೇ ಕೊಂದು ಹಾಕಿದೆ. ದಾಳಿಯ ಬಳಿಕ ಹುಲಿ ಅರಣ್ಯ ಭಾಗದತ್ತ ಓಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೇವಲ 15 ದಿನಗಳೊಳಗೆ ಸರಗೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಹುಲಿ ದಾಳಿಗಳು ಸಂಭವಿಸಿದ್ದು, ಈ ಅವಧಿಯಲ್ಲಿ ಇಬ್ಬರು ಸಾವನ್ನಪ್ಪಿ, ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಪರಿಣಾಮ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಹುಲಿ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಅಗತ್ಯ ಕ್ರಮವಾಗಿ ಪಿಂಜರಗಳು ಅಳವಡಿಸುವ ಕೆಲಸ ಕೂಡ ಪ್ರಾರಂಭವಾಗಿದೆ.
ಗ್ರಾಮಸ್ಥರು ಹುಲಿ ತಕ್ಷಣ ಹಿಡಿಯಲು ಹಾಗೂ ಪ್ರಾಣಾಪಾಯದ ಪರಿಸ್ಥಿತಿ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.








