ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆಕೆರೆ ಸಮೀಪ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಅಪಘಾತ ನಡೆದಿದೆ ಎನ್ನಲಾಗಿದೆ.
ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರದ ಯುವತ್ಮಾಳ್ ಜಿಲ್ಲೆಯ ಗುಪವಾಡಿ ಗ್ರಾಮದವರು ಆಗಿದ್ದು, ಕಬ್ಬಿನ ಕಟಾವಿಗಾಗಿ ಜಮಖಂಡಿ ಭಾಗಕ್ಕೆ ಬಂದಿದ್ದರು. ಅಪಘಾತದ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇದನ್ನು ಓದಿ –ಏಪ್ರಿಲ್ 1ರಿಂದ ಟೋಲ್‌ನಲ್ಲಿ ನಗದು ರದ್ದು?
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.







