ಜಗತ್ತು ನಮಗೆ ಏನು ಕೊಡ್ತು ಎನ್ನುವುದಕ್ಕಿಂತ ಜಗತ್ತಿಗೆ ನಾವು ಏನು ಕೊಟ್ವಿ ಅಂತ ವಿಚಾರ ಮಾಡಿದರೆ, ಏನೂ ಕೊಟ್ಟಿಲ್ಲ ಅಥವಾ ಮೈನಸ್ ಸೊನ್ನೆ ಕೊಟ್ಟಿದ್ದೀವಿ ಅಲ್ವಾ! ನಾವು ಕಲಿಯುವ ವಿದ್ಯೆಯೂ ನಮಗಾಗಿಯೇ, ನಮ್ಮ ಸುಖಕ್ಕಾಗಿ, ಜೀವನದಲ್ಲಿ ಶ್ರೀಮಂತಿಕೆ ಹೊಂದಲು ಹೊರತು ದೇಶ ಸೇವೆಗಾಗಿ ಅಲ್ಲ! ಆದರೆ ದೇಶ ಮಾತ್ರ ನಮಗಾಗಿಯೇ ಇದೆ!
ಪ್ರಕೃತಿ ಕೊಟ್ಟಿದ್ದನ್ನು ಹೀರಿಕೊಳ್ಳುವುದು ಅದರ ಬುಡಕ್ಕೆ ಕೊಳ್ಳಿ ಇಡುವುದು ಇಷ್ಟೇ ಗೊತ್ತು ಸ್ವಾರ್ಥ ಮನುಷ್ಯನಿಗೆ!
ವಿಜ್ಞಾನ ಬೆಳೆದೆಂತೆಲ್ಲ ಜೀವನ ನೈಜತೆಯಿಂದ ದೂರ ಸರಿಯುತ್ತಿದೆ, ಎಲ್ಲರ ಮನಸ್ಸುಗಳು ಬರೀ ಪ್ರಾಕ್ಟಿಕಲ್ ಯೋಜನೆಯನ್ನೇ ಹಾಕುತ್ತದೆ!
ಹಸುಗಳ ಕೆಚ್ಚಲಿಗೆ ಮಶಿನ್ ಹಚ್ಚಿ ಪೂರ್ತಿ ಹಾಲನ್ನು ಖಾಲಿ ಮಾಡುವುದು, ಆ ಸಮಯದಲ್ಲಿ ಅದರ ಸಂಕಟ ಏನಿರುತ್ತದೆಯೋ, ಎಷ್ಟೋ ಪ್ರಾಣಿಗಳನ್ನು ನಮ್ಮ ಆಹಾರಕ್ಕಾಗಿಯೇ ಸಾಕುವುದು!
ಕತ್ತೆ, ಒಂಟಿ, ಹಸು ಇವುಗಳ ಮೇಲೆ ವಿಚಿತ್ರ ಭಾರ ಹಾಕಿ ಕೆಲಸ ಮಾಡಿಸುವುದು!
ಹೀಗೆ ಬೇಕಾದಷ್ಟು ಬಳಕೆಯನ್ನು ಮಾಡಿಕೊಳ್ಳುತ್ತೇವೆ!
ಒಂದೆರಡು ಪ್ರಾಣಿ ಎಂದರೆ ನಾಯಿ, ಬೆಕ್ಕು ಮಾತ್ರ ಸುಖದಿಂದ ಜೀವನ ಮಾಡುತ್ತಿವೆ, ಅವುಗಳನ್ನು ಯಾರೂ ಆಹಾರವಾಗಿಸುವುದಿಲ್ಲ ಪುಣ್ಯಕ್ಕೆ! ಅವುಗಳನ್ನು ಮಾತ್ರ ತಮ್ಮ ಪ್ರೀತಿಯ ಪ್ರಾಣಿಗಳಾಗಿ ನೋಡಿಕೊಳ್ಳುತ್ತಾರೆ!
ಇನ್ನು ಕುರಿ,ಕೋಳಿ, ಹಂದಿ, ಹಸು ಇವು ಮನುಷ್ಯರ ತುಳಿತಕ್ಕೆ ಸಿಕ್ಕಿ ಪ್ರಾಣಿಗಳು! ಜೊತೆಗೆ ಎಷ್ಟೋ ಕ್ರಿಮಿ,ಕೀಟಗಳು ಕೂಡ!
ಇದೆಲ್ಲ ಮನುಷ್ಯನ ವ್ಯಕ್ತಿತ್ವದಲ್ಲಿ ಹೇಗೆ ಬಂತೋ ಗೊತ್ತಿಲ್ಲಾ!
ನಮ್ಮ ಮಕ್ಕಳಿಗಾಗಿ ಕರುಣೆಯ ಕಡಲನ್ನೇ ಹರಸುವ ನಾವು ಯಾಕೆ ಪ್ರಾಣಿಗಳ ಬಗ್ಗೆ ನಮ್ಮ ಮನಸ್ಸನ್ನು ಇಷ್ಟು ಕಠಿಣ ಮಾಡಿಕೊಂಡಿದ್ದೇವೆ ಗೊತ್ತಿಲ್ಲ!
ನಮ್ಮ ಜೀವನದಲ್ಲಿ ನಾವು ಸಂತೋಷವಾಗಿ ಇದ್ದೇವೆ ಎಂದರೆ ಅದು ಪ್ರಕೃತಿಯ ಕೊಡುಗೆ, ಪ್ರಾಣಿಗಳ ಸಹಾಯದಿಂದ ಮಾತ್ರ!
ಆದರೆ ವಿಜ್ಞಾನಿಗಳು ರೋಬೋಟ್ ಸೃಷ್ಟಿಸುವುದಲ್ಲದೇ ಮನುಷ್ಯರ ಮನಸ್ಥಿತಿಯನ್ನು ರೋಬೋಟ್ ರೀತಿಯಲ್ಲಿ ತಂದು ನಿಲ್ಲಿಸಿದ್ದಾರೆ! ಈಗಂತೂ A I ಬಂದು ಮನುಷ್ಯ ತನ್ನ ಮುಂದಿನ ಪೀಳಿಗೆಗಳನ್ನು ಅಳಿವಿನ ಅಂಚಿಗೆ ತಂದು ಇಟ್ಟಿರಬಹುದು!
ಎಲ್ಲಿಯವರೆಗೆ ಧಾರ್ಮಿಕ ಮನೋಭಾವ,ಕರುಣೆ, ಪ್ರೀತಿ ಮಾನವೀಯತೆ ಉಳಿಯುತ್ತದೆಯೋ ಗೊತ್ತಿಲ್ಲ!
ಯಾವತ್ತೂ ದೇವರ ಸೃಷ್ಟಿಗೆ ನಾವು ಪೂರ್ತಿಯಾಗಿ ಎದುರಾಳಿಯಾಗಿ ನಿಲ್ಲುತ್ತೇವೆಯೋ ಆಗ ಜಗತ್ತು ಪ್ರಳಯವಾದಂತೆಯೇ ಸರಿ!
ಒಂದೊಂದು ಸಲ ನನಗೆ ವಿಚಿತ್ರ ಭಾವನೆ ಬರುತ್ತದೆ, ಮಕ್ಕಳಿಗೆ ವಿದ್ಯೆಯ ಹೆಸರಿನಲ್ಲಿ ಬರೀ ದುಡ್ಡಿನ ಆಸೆಯನ್ನೇ ತುಂಬಿಸಿ
ಅವರಲ್ಲಿರುವ ವಿಜ್ಞಾನನದ ಜ್ಞಾನವನ್ನು ಹೆಚ್ಚಿಸುತ್ತಾ ಅವರಲ್ಲಿರುವ ಧಾರ್ಮಿಕ ಮನೋಭಾವಕ್ಕೆ ನಾವು ಹಿರಿಯರೇ ಕೊಳ್ಳಿ ಇಡುತ್ತಿರಬಹುದೇನೋ ಎನ್ನುವ ಹೇಳಲಾಗದ ಸಂಕಟ, ತಳಮಳ!

ಸ್ನೇಹಾ ಆನಂದ್








