ಭವ್ಯ ಕನ್ನಡನಾಡಿನಲಿ ಹಬ್ಬಗಳು ಹಲವು ಆದರೆ ಕೆಲವೇ ಕೆಲವು ಹಬ್ಬಗಳು ಸಂಭ್ರಮ ಸಡಗರವನ್ನು ಇಮ್ಮಡಿಗೊಳಿಸುತ ನಾಡಿನ ಸಾಂಸ್ಕೃತಿಕತೆಯನ್ನು ಎತ್ತಿ ಹಿಡಿಯುತ್ತವೆ ಅಂತಹ ಹಬ್ಬಗಳಲ್ಲಿ ದಸರಾ ಹಬ್ಬವು ಒಂದು.ಇದನ್ನು ನಾಡಹಬ್ಬವೆಂತಲೂ ಕರೆಯುವರು ಕನ್ನಡನಾಡಿನ ನೆಲ,ಜಲ,ಭಾಷೆ, ಕಲೆಗಳನ್ನು ಉಳಿಸುವಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತತ್ಪರವಾಗಿದೆ.
ಇವುಗಳನ್ನು ರಕ್ಷಿಸುವಲ್ಲಿ ಮೂಲ ಪಾತ್ರವನ್ನು ನಿರ್ವಹಿಸುತ್ತಿದೆ.ಸಂಪ್ರದಾಯಗಳನ್ನು ಪರಿಪಾಲಿಸುತ ಇಂದಿಗೂ ತನ್ನದೆಯಾದ ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಜಂಬೂ ಸವಾರಿ,ಚಾಮುಂಡೇಶ್ವರಿ ಪೂಜೆ,ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸುವುದು,ರಾಜ ಉಪಸ್ಥಿತರಿದ್ದು ಸಕಲ ಪೂಜಾ ವಿಧಾನಗಳನ್ನು ನೆರವೇರಿಸಿ ದಸರಾ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಎತ್ತಿ ತೋರಿಸುವುದರಲ್ಲಿ ದಸರಾ ಹಬ್ಬವು ಮುಂಚೂಣಿಯಲ್ಲಿದೆ.ನಾಡಿನ ದೇವತೆಗಳನ್ನು ಪೂಜಿಸುವುದರ ಮೂಲಕ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಚಾಚು ತಪ್ಪದೆ ಪಾಲಿಸುತ ಸಾಂಸ್ಕೃತಿಕ ಹಿರಿಮೆಯನ್ನು ಪಸರಿಸುತ್ತದೆ.
ಹಿಂದಿನ ರಾಜಮನೆತನವು ಆಚರಿಸಿಕೊಂಡು ಬಂದ ರೀತಿಯಲ್ಲೇ ದಸರಾ ಹಬ್ಬವನ್ನು ಕಟ್ಟು ನಿಟ್ಟಿನಿಂದ ಸಂಪ್ರದಾಯದ ವಿಧಾನಗಳ ಮೂಲಕ ಆಚರಿಸುವರು. ದಸರಾ ಹಬ್ಬದ ಪ್ರಯುಕ್ತ ವಿವಿಧ ಕಲೆಗಳಿಗೆ ಪ್ರಾಶಸ್ತ್ಯ ನೀಡುತ ನಾಡಿನ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲೆಗಳ ಮಹತ್ವವನ್ನು ಇಂದಿನ ಜನಾಂಗಕ್ಕೆ ತಿಳಿಸಿಕೊಡುತ್ತಿದೆ.ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳು ನಾಡಿನ ಐತಿಹಾಸಿಕ ಸಾಂಸ್ಕೃತಿಕ ಧಾರ್ಮಿಕತೆಯನ್ನು ಬಿಂಬಿಸುತ ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ.
ದಸರಾ ಹಬ್ಬದ ಸಾಂಸ್ಕೃತಿಕ ವಿಶೇಷತೆ:
- 1.ಕಲೆಗಳ ಅನಾವರಣ:ದಸರಾ ಹಬ್ಬದಲ್ಲಿ ವಿವಿಧ ಕಲೆಗಳನ್ನು ಪ್ರದರ್ಶಿಸುವುದಲ್ಲದೆ ಅವುಗಳ ಅರಿವನ್ನು ಮೂಡಿಸುವಲ್ಲಿ ಫಲಪ್ರಧವಾಗಿದೆ.ಇದರಿಂದ ಮುಂಬರುವ ಜನಾಂಗಕ್ಕೆ ಕಲೆಯ ಬೆಲೆ ಗೊತ್ತಾಗುತ್ತದೆ.
- 2.ಭಾಷೆಯ ಕುರಿತು ಗೋಷ್ಠಿಗಳು:ಕನ್ನಡ ಭಾಷೆಯ ಕುರಿತಾಗಿ ವಿವಿಧ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ನಾಡಿನ ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಭಾಷಾ ಏಳಿಗೆಯ ಕುರಿತು ಅರಿವು ಮೂಡಿಸುತ್ತದೆ
- 3.ಜಾನಪದ ಕಲಾ ಮೇಳ:ಜನಪದ ಜನರಿಂದ ಉಗಮವಾದ ಸಾಹಿತ್ಯ ಪ್ರಕಾರ ಆಯಾ ಪ್ರಾದೇಶಿಕ ಪ್ರದೇಶಗಳ ಜಾನಪದ ಕಲೆಗಳಾದ ಹಗಲು ವೇಷ,ವೀರ ಗಾಸೆಯಂಥ ಜನಪದ ಕಲೆಗಳಿಗೆ ಅವಕಾಶ ನೀಡುವ ಮೂಲಕ ಜಾನಪದ ಸಂಸ್ಕೃತಿಯ ಉಳಿವಿಗೆ ದಸರಾ ಪ್ರೇರಕವಾಗಿದೆ
- 4.ಸಂಪ್ರದಾಯದ ಪರಿಚಯ:ಈ ಹಬ್ಬ ಮಕ್ಕಳಿಗೆ ಧಾರ್ಮಿಕ ಮತ್ತು ಐತಿಹಾಸಿಕ ಸಂಪ್ರದಾಯಗಳನ್ನು ಪರಿಚಯಿಸಿಕೊಡಲು ನೇರವಾಗಿ ಅವರಿಗೆ ಸಂಪ್ರದಾಯದ ಮಹತ್ವ ಅರ್ಥೈಸಲಾಗುವುದು.
- 5.ಸಾಂಸ್ಕೃತಿಯ ಅರಿವು:ದೇಶ ವಿದೇಶಗಳಿಂದ ಸಹಸ್ರಾರು ಜನರು ಆಗಮಿಸುವುದರಿಂದ ನಾಡಿನ ಕಲೆ,ಸಾಹಿತ್ಯ ಸಂಸ್ಕೃತಿ ಅರಿತುಕೊಳ್ಳಬಹುದು
- 6.ವಿಜಯದ ದ್ಯೋತಕ:ಈ ಹಬ್ಬವು ವಿಜಯದ ಸಂಕೇತವಾಗಿದ್ದು ಕೇಡಿನ ವಿರುದ್ಧ ಜಯ ಸಾಧಿಸುವುದರ ಮೂಲಕ ಒಳಿತನು ಬಯಸುವುದರ ಪ್ರತೀಕವಾಗಿದೆ
- 7.ಪರಂಪರೆ:ವಿಜಯನಗರ ಸಾಮ್ರಾಜ್ಯ ಮತ್ತು ಒಡೆಯರ ಆಳ್ವಿಕೆಯಲ್ಲಿ ಹೇಗೆ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸುತ್ತಿದ್ದರೋ ಅದೇ ರೀತಿಯ ಪರಂಪರೆ ಇಂದಿಗೂ ಮುಂದುವರೆದಿದೆ
- 8.ಸಾಂಸ್ಕೃತಿಕ ಪ್ರಜ್ಞೆ:ತಂತ್ರಜ್ಞಾನ ಯುಗದಲ್ಲಿ ದೇಶದ ಸಂಸ್ಕೃತಿ ಮರೆಯುತ್ತಿರುವ ಯುವ ಜನಾಂಗಕ್ಕೆ ನೆಲ ಜಲ ಭಾಷೆ ಪೂರಕ ಕಲೆಗಳ ಮೂಲಕ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ದಸರಾ ಹಬ್ಬ ಅಡಿಪಾಯವಾಗಿದೆ.
ದಸರಾ ಹಬ್ಬವು ಎಂದಿಗೂ ತನ್ನ ಕಳೆಯನ್ನು ಕಳೆದುಕೊಳ್ಳುವುದಿಲ್ಲ ಇಂದಿಗೂ ಜನಸಾಮಾನ್ಯರು ದಸರಾ ಹಬ್ಬದಂದು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವುದರ ಮೂಲಕ ಬಾಂಧವ್ಯವು ಗಟ್ಟಿಯಾಗಲೆಂದು ಹಾರೈಸುವುದಲ್ಲದೆ ನಾಡ ಸಂಸ್ಕೃತಿ ಪೋಷಿಸಿ ಉಳಿಸೋಣ ಎಂಬ ವಾಗ್ದಾನ ಮಾಡುವರು.
ನಾಡಿನ ಸಂಸ್ಕೃತಿಯನ್ನು ಅನಾವರಣಗೊಳಿಸಿ ಜನ ಮಾನಸದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿದೆ.ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಸಾಮರಸ್ಯದಿಂದ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.ಹಾಗಾಗಿ ದಸರಾ ಬರೀ ಹಬ್ಬವಲ್ಲ ನಾಡಿನ ಸಾಂಸ್ಕೃತಿಯನ್ನು ಎತ್ತಿ ಹಿಡಿಯುವ ನಾಡಿನ ಹಬ್ಬ .

ಅವಿನಾಶ ಸೆರೆಮನಿ








