ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರ ಅಂತಿಮ ಸಂಸ್ಕಾರ ಇಂದು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಜಮೀನಿನಲ್ಲಿ ನೆರವೇರಲಿದೆ.
ಮಧ್ಯಾಹ್ನ 2 ಗಂಟೆಯ ಬಳಿಕ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಅಂತ್ಯಕ್ರಿಯೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಪೂರ್ಣಗೊಳಿಸಿದೆ.
ಚೆನ್ನಮ್ಮ ದೇವೇಗೌಡ ಅವರ ಪಾರ್ಥಿವ ಶರೀರವನ್ನು ಹೊಳೆನರಸೀಪುರ ಪಟ್ಟಣದಲ್ಲಿರುವ ಹೆಚ್.ಡಿ. ರೇವಣ್ಣ ಅವರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು, ರಾಜಕೀಯ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಸರಳತೆ, ಸೌಜನ್ಯ ಮತ್ತು ಆತಿಥ್ಯಕ್ಕೆ ಹೆಸರಾಗಿದ್ದ ಚೆನ್ನಮ್ಮ ದೇವೇಗೌಡ ಅವರು ದೊಡ್ಡಗೌಡರ ಕುಟುಂಬದ ಆಧಾರಸ್ತಂಭವಾಗಿದ್ದರು. ಮನೆ ಬಾಗಿಲಿಗೆ ಬಂದವರನ್ನು ಆತ್ಮೀಯವಾಗಿ ಸ್ವಾಗತಿಸಿ, ಊಟ ಮಾಡಿಸದೇ ಕಳುಹಿಸದ ಅವರ ನಡೆ ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. ರಾಜಕೀಯ ಕುಟುಂಬದ ಸದಸ್ಯೆಯಾಗಿದ್ದರೂ ಗ್ರಾಮೀಣ ಜೀವನದ ಮೌಲ್ಯಗಳು, ಪ್ರೀತಿ ಮತ್ತು ಮಾನವೀಯತೆಯನ್ನು ಜೀವನದುದ್ದಕ್ಕೂ ಉಳಿಸಿಕೊಂಡಿದ್ದರು.
ಅಂತ್ಯಕ್ರಿಯೆ ನಡೆಯಲಿರುವ ಸ್ಥಳದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಸುಮಾರು 30 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಅಂತ್ಯಸಂಸ್ಕಾರದ ಸ್ಥಳವನ್ನು ನಿಗದಿಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಬೆಂಗಳೂರಿನ ಜೆ.ಪಿ.ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಕಣ್ಣನ್ ಸ್ವಾಮಿ ಅವರ ನೇತೃತ್ವದಲ್ಲಿ ವೇದೋಕ್ತ ವಿಧಿವಿಧಾನಗಳು ನಡೆಯಲಿದ್ದು, ಸಂಜೆ 4.30 ಗಂಟೆಯೊಳಗೆ ಅಂತಿಮ ಸಂಸ್ಕಾರ ಪೂರ್ಣಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ.








