- ನಿಯೋಜಿತ ಸಿಬ್ಬಂದಿಗೆ ರಾಜ್ಯ ಸರ್ಕಾರದ ಎಚ್ಚರಿಕೆ
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ಶೀಘ್ರ ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ಶೀಘ್ರ ಪೂರ್ಣಗೊಳಿಸಲು ಮುಂದಾಗಿರುವ ಸರ್ಕಾರ, ಅರಣ್ಯ, ಆರೋಗ್ಯ, ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದೆ. ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಹಾಜರಾಗದಿದ್ದರೆ ಎಫ್‌ಐಆರ್ ದಾಖಲಿಸಿ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಬಳಸಿಕೊಂಡು ಸರ್ಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ಪ್ರತ್ಯೇಕ ಸಂದೇಶ ಹಾಗೂ ಇ-ಮೇಲ್ ಗಳನ್ನು ರವಾನಿಸಿದೆ. ಸಂದೇಶದಲ್ಲಿ ಅಕ್ಟೋಬರ್ 3ರಂದು ತರಬೇತಿಯಲ್ಲಿ ಭಾಗವಹಿಸಲು ಮತ್ತು ಅಕ್ಟೋಬರ್ 4ರಿಂದ ಜನಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಸಿಬ್ಬಂದಿಗೆ ಆದೇಶಿಸಿದೆ. ಸಮೀಕ್ಷೆಗೆ ಹಾಜರಾಗದೆ ಇದ್ದರೆ, ಬಿಎನ್‌ಎಸ್’ನ ಸೆಕ್ಷನ್ 223ರ ಅಡಿಯಲ್ಲಿ ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು ಲಿಖಿತವಾಗಿ ಒಪ್ಪಿಗೆ ನೀಡದ ಹೊರತು ಯಾವುದೇ ವಿನಾಯಿತಿಗಳನ್ನು ನೀಡುವುದಿಲ್ಲ ಎಂದೂ ತಿಳಿಸಿದೆ.
ಸರ್ಕಾರದ ಈ ಸೂಚನೆ ಸರ್ಕಾರಿ ಅಧಿಕಾರಿಗಳಲ್ಲಿ ಕಳವಳವನ್ನುಂಟು ಮಾಡಿದೆ. ಜನಗಣತಿಗಾಗಿ ಎಲ್ಲಾ ಕಾಯಂ ಸಿಬ್ಬಂದಿಯನ್ನು ನಿಯೋಜನೆಗೊಳಿಸಿರುವುದರಿಂದ, ಸರ್ಕಾರಿ ಕೆಲಸವನ್ನು ಗುತ್ತಿಗೆ ನೌಕರರೇ ಮಾಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದುರ.
ಅರಣ್ಯ ಇಲಾಖೆ ಸಿಬ್ಬಂದಿಗೆ ಚುನಾವಣಾ ಕರ್ತವ್ಯ ಸೇರಿದಂತೆ ಇತರೆ ಕರ್ತವ್ಯಗಳಿಂದ ವಿನಾಯಿತಿ ನೀಡಲಾಗಿದೆ. ಆದರೂ ಈಗ ಜಾತಿ ಗಣತಿಗೆ ನಿಯೋಜನೆಗೊಳಿಸಲಾಗಿದೆ. ಮಾನವ- ಪ್ರಾಣಿ ಸಂಘರ್ಷ ಅಥವಾ ಯಾವುದೇ ಅಹಿತಕರ ಘಟನೆ ನಡೆದರೆ, ನಾವು ಜವಾಬ್ದಾರರಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾವಲುಗಾರರು, ವೀಕ್ಷಕರು, ರೇಂಜ್ ಫಾರೆಸ್ಟ್ ಅಧಿಕಾರಿಗಳು, ಉಪ ಆರ್‌ಎಫ್‌ಒ, ಬೇಟೆ ನಿಗ್ರಹ ತಂಡಗಳು, ಚಿರತೆ ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಸಮೀಕ್ಷೆ ಬಳಿಕ ಕರ್ತವ್ಯ ನಿರ್ವಹಿಸುವಂತೆ ಪಾಲಿಕೆ ಸಲಹೆ ನೀಡಿದೆ. ಆದರೆ, ಅರಣ್ಯ ಇಲಾಖೆಯ ಕೆಲಸಗಳು ಕುರ್ಚಿ ಮೇಲೆ ಕುಳಿತು ಮಾಡುವಂತಹ ಕೆಲಸವಲ್ಲ. ಗ್ರೌಂಡ್ ವರ್ಕ್ ಆಗಿರುತ್ತದೆ ಎಂದು ನೌಕರರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳೂ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞರು, ಔಷಧಿಕಾರರು, ಕ್ಲೆರಿಕಲ್ ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಿಬ್ಬಂದಿಯನ್ನು ಜನಗಣತಿಗಾಗಿ ನಿಯೋಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಹಲವು ಸಮಸ್ಯೆಗಳಿವೆ. ಸಾಕಷ್ಟು ದೂರುಗಳೂ ಇವೆ. ಇದೀಗ ಕರ್ತವ್ಯದಿಂದ ಸಿಬ್ಬಂದಿಗಳನ್ನು ದೂರಾಗಿಸುವುದರಿಂದ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈಗಾಗಲೇ ಸಿಬ್ಬಂದಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ, ವಿನಾಯಿತಿಗಾಗಿ ಮುಖ್ಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗುವುದು ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ದಸರಾ ರಜೆಯ ನಂತರ ಶಾಲೆಗಳು ಮತ್ತೆ ಆರಂಭವಾಗಲಿದೆ. ಪರಿಸ್ಥಿತಿ ನಿಭಾಯಿಸುವುದು ಕಷ್ಟಕರ. ಸಮೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ರಜಾ ದಿನಗಳನ್ನು ರದ್ದುಪಡಿಸಲಾಗಿದೆ. ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ ಬಳಸಿಕೊಳ್ಳಬೇಕೆಂದು ನಾವು ಮನವಿ ಮಾಡಿದ್ದೇವೆ. ಆದರೂ ಮಧ್ಯಮ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಜನಗಣತಿಗೆ ನಿಯೋಜಿಸಲಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳಿಗೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರನ್ನು ಬಳಸಲಾಗುತ್ತದೆ.ಇದನ್ನು ಓದಿ –ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ಸರ್ಕಾರಿ ನೌಕರರನ್ನು ಒಳಗೊಳ್ಳುವ ಬಗ್ಗೆ ಸರ್ಕಾರಿ ಆದೇಶಗಳು ಸ್ಪಷ್ಟವಾಗಿವೆ. ಎರಡು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಠ 20,000 ಸಿಬ್ಬಂದಿ ಅಗತ್ಯವಿದೆ. ಸರ್ಕಾರಿ ಸಿಬ್ಬಂದಿ ಭಾಗಿಯಾಗಿದರೆ ಸಮೀಕ್ಷೆಯು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.








