ರಾಮನಗರ: ಜ್ಯೂಸ್ ಅಂಗಡಿ ಮಾಲೀಕನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾಗಿ ಬೆದರಿಸಿ ₹1.50 ಲಕ್ಷ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕಗ್ಗಲೀಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹರೀಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅಮಾನತುಗೊಳಿಸಿದ್ದಾರೆ.
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಹಣ ವಸೂಲಿ ಆರೋಪ ಎದುರಿಸಿದ್ದ ಹರೀಶ್, ಬಳಿಕ ಕಗ್ಗಲೀಪುರ ಠಾಣೆಗೆ ವರ್ಗಾವಣೆಯಾಗಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಕನಕಪುರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಜ್ಯೂಸ್ ಅಂಗಡಿ ಹೊಂದಿರುವ ರಾಜೇಶ್ ಅವರಿಗೆ ಅಕ್ಟೋಬರ್ 29ರಂದು ಕರೆ ಮಾಡಿದ್ದ ಹರೀಶ್, ‘ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ’ ಎಂದು ಬೆದರಿಸಿ, ಅವರನ್ನು ಬಲವಂತವಾಗಿ ಚನ್ನಪಟ್ಟಣಕ್ಕೆ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎನ್ನಲಾಗಿದೆ. ಬಳಿಕ ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿ ₹1.50 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.
ಈ ಸಂಬಂಧ ರಾಜೇಶ್ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೇಂದ್ರ ವಲಯದ ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಪ್ರಕರಣವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ, ಜಿಲ್ಲಾ ಎಸ್‌ಪಿ ಶ್ರೀನಿವಾಸ ಗೌಡ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಿಇಎನ್ ಡಿವೈಎಸ್ಪಿ ಕೆಂಚೇಗೌಡ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು.ಇದನ್ನು ಓದಿ –ಕಾರ್ಯಪಾಲಕ ಇಂಜಿನಿಯರ್ ಮನೆ–ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಡಿವೈಎಸ್ಪಿ ನೀಡಿದ ವರದಿಯ ಆಧಾರದ ಮೇಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೋಮವಾರ ಪಿಎಸ್‌ಐ ಹರೀಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ತಿಳಿಸಿದ್ದಾರೆ.








