“ಅಪ್ಪಾ” ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ… ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾದ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದನೇನೋ, ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ. ಕೋಪ, ಅತಿ ಎನ್ನಿಸುವ ಶಿಸ್ತು. ಅನುಮಾನ ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪನ ಬಗ್ಗೆ ಅದೆಂಥದ್ದೋ ಅಮೂರ್ತ ಭಯ.
ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದುಕೊಂಡರೇ ತಪ್ಪು. ಆತನಲ್ಲಿ ಅತೀವ ಒಲವಿದೆ. ಆದರೆ ತಾಯಿಯ ಹಾಗೆ ಅದನ್ನು ತೋರಗೊಡಲಾರ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳಾನೇ ಕಷ್ಟ.
ಅಪ್ಪ ಎಂಬ ಪದವೇ ಬದುಕಿಗೆ ಒಂದು ಭರವಸೆಯ ನೆರಳು. ಕೈ ಹಿಡಿದು ನಡೆಯುವ ಧೈರ್ಯ, ತಪ್ಪು ಮಾಡಿದಾಗ ತಿದ್ದುವ ಕಾಳಜಿ, ಗೆಲುವಿನಲ್ಲಿ ಬೆನ್ನು ತಟ್ಟುವ ಮೌನದ ಹರ್ಷ—ಇವೆಲ್ಲವೂ ಅಪ್ಪನ ಸಾನ್ನಿಧ್ಯದಲ್ಲೇ ಜೀವಂತವಾಗಿರುತ್ತವೆ. ಆದರೆ ಆ ಆಸರೆ ಇಲ್ಲದ ಬದುಕು, ಹೇಳಲಾಗದ ಖಾಲಿತನವನ್ನು ಹೃದಯದೊಳಗೆ ತುಂಬಿಕೊಂಡೆ ಸಾಗುತಿದೆ..
ಅಪ್ಪ ಇಲ್ಲದ ಮನೆ ಮೌನವಾಗಿ ಮಾತನಾಡುತ್ತದೆ. ಹಬ್ಬ – ಹರಿದಿನಗಳ ನಗುವಿನ ನಡುವಿನಲೂ, ಶಾಲಾ /ಕಾಲೇಜಿನ ಸಮಾರಂಭಗಳ ಸಮಯದಲ್ಲೂ, ಜೀವನದ ಮಹತ್ವದ ತಿರುವುಗಳಲ್ಲಿ “ಅಪ್ಪ ಇದ್ದಿದ್ದರೆ…” ಎಂಬ ಯೋಚನೆ ಮನಸ್ಸನ್ನು ಮಿಡಿಯಿಸುತ್ತದೆ. ಸಲಹೆ ಬೇಕಾದ ಕ್ಷಣಗಳಲ್ಲಿ, ಧೈರ್ಯ ಕಮ್ಮಿಯಾದಾಗ, ಆಧಾರವಾಗಬೇಕಿದ್ದ ಕೈ ಕಾಣದೆ ಮನಸ್ಸು ಒದ್ದಾಡುತ್ತಿದೆ.
ಆದರೂ ಅಪ್ಪನೆಂಬ ಆಸರೆ ಇಲ್ಲದ ಬದುಕು ದುರ್ಬಲತೆಯಲ್ಲ. ಆ ಕೊರತೆಯಲ್ಲೇ ಬಲ ಬೆಳೆದುಬರುತ್ತದೆ. ತಾಯಿಯ ತ್ಯಾಗ, ಜೀವನದ ಪಾಠಗಳು, ಸ್ವಂತ ಪರಿಶ್ರಮ—ಇವೆಲ್ಲ ಸೇರಿ ವ್ಯಕ್ತಿತ್ವವನ್ನು ಗಟ್ಟಿ ಮಾಡುತ್ತವೆ. ಚಡ್ಡಿ ಹಾಕೋ ವಯಸ್ಸಿನಲ್ಲೇ ಜವಾಬ್ದಾರಿಗಳ ಮೂಟೆ ಹೊತ್ತು ಬೇಗನೆ ದೊಡ್ಡವರಾದಂತೆ, ಜವಾಬ್ದಾರಿ ಕಣ್ಣೀರನ್ನು ಒಳಗಿಟ್ಟುಕೊಂಡೇ ನಗುವ ಶಕ್ತಿ, ಇತರರ ನೋವನ್ನು ಅರಿಯುವ ಮನಸ್ಸು—ಇವು ಅಪ್ಪನಿಲ್ಲದ ಬದುಕು ಕಲಿಸುವ ಮೌನ ಪಾಠಗಳಾಗಿವೆ.
ಅಪ್ಪ ದೈಹಿಕವಾಗಿ ಇಲ್ಲದಿದ್ದರೂ, ಅವರ ಮೌಲ್ಯಗಳು, ನೆನಪುಗಳು, ಮಾತುಗಳು, ಅವರ ಸರಳತೆ ಬದುಕಿಗೆ ದಾರಿದೀಪವಾಗಿವೆ. ಪ್ರತಿಯೊಂದು ಹೆಜ್ಜೆಯಲ್ಲೂ ಅವರು ಕಲಿಸಿದ ಸತ್ಯ, ಶ್ರಮ, ಮಾನವೀಯತೆ ಜೊತೆಯಾಗಿರುತ್ತವೆ. ಹಾಗಾಗಿ ಅಪ್ಪನೆಂಬ ಆಸರೆ ಇಲ್ಲದ ಬದುಕು ಖಾಲಿತನವಷ್ಟೇ ಅಲ್ಲ; ಅದು ನೆನಪುಗಳ ಬೆಳಕಿನಲ್ಲಿ ಸಾಗುವ, ನೋವಿನಿಂದ ಬಲ ಪಡೆದ, ನಿರೀಕ್ಷೆಯತ್ತ ನಡೆಯುವ ಜೀವನವೆಂದರೆ ತಪ್ಪಾಗದು..!
ಅಪ್ಪ ಇಲ್ಲದಿರುವುದನ್ನು ಕಾಲ ಮಾತ್ರ ಮರೆಮಾಚಲಾರದು. ವರ್ಷಗಳು ಜಾರಿದಂತೆ ನೆನಪುಗಳು ಮಸುಕಾಗದೆ ಇನ್ನಷ್ಟು ಗಟ್ಟಿಯಾಗುತ್ತಿವೆ. ಅವರ ಧ್ವನಿಯ ಪ್ರತಿಧ್ವನಿ ಮನಸ್ಸಿನೊಳಗೆ ಉಳಿದು, ಪ್ರತಿಯೊಂದು ನಿರ್ಧಾರಕ್ಕೂ ಮೌನವಾಗಿ ಪ್ರಶ್ನಿಸುತ್ತಿದೆ.
ಇದು ಸರಿಯೋ? ತಪ್ಪೋ? ಎಂದು. ಉತ್ತರ ಸಿಗದ ಎಷ್ಟೋ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ.
ಬಾಲ್ಯದಲ್ಲಿ ಕೈ ಹಿಡಿದು ದಾಟಿಸಬೇಕಿದ್ದ ರಸ್ತೆಗಳನ್ನು ಈಗ ಒಬ್ಬನೇ ದಾಟಬೇಕು. ಸೋಲು ಬಂದಾಗ ತಲೆ ತಟ್ಟುವ ಕೈ ಇಲ್ಲ, ಗೆಲುವು ಬಂದಾಗ ಎದೆ ತುಂಬಿಕೊಳ್ಳುವ ಅಪ್ಪುಗೆಯೂ ಇಲ್ಲ. ಜನರ ಮಧ್ಯೆ ನಿಂತರೂ ಒಳಗೊಂದು ಏಕಾಂತ. ಆದರೆ ಆ ಏಕಾಂತವೇ ಸ್ವಾವಲಂಬನೆಯ ಬೀಜವಾಗುತ್ತಿದೆ; ಕೆಳಗೆ ಬಿದ್ದಾಗ ಎದ್ದು ನಿಲ್ಲುವ ಅಭ್ಯಾಸವನ್ನೇ ಬದುಕು ಕಲಿಸುತ್ತದೆ.
ಕೆಲವೊಮ್ಮೆ ರಾತ್ರಿ ಮೌನದಲ್ಲಿ ಕಣ್ಣೀರು ಮಾತಾಡುತ್ತದೆ. ಯಾರಿಗೂ ಹೇಳಲಾಗದ ನೋವು, ಯಾರೂ ಕೇಳದ ಪ್ರಶ್ನೆಗಳು ಹೃದಯದೊಳಗೆ ಗುಣಗಾಡುತ್ತಿವೆ. ಆ ಕ್ಷಣಗಳಲ್ಲಿ ಅಪ್ಪನ ಫೋಟೋ ಮುಂದೆ ನಿಂತು, ಮಾತಿಲ್ಲದೇ ಹೇಳಿಕೊಂಡ ನೋವು – ನಲಿವುಗಳು, ಮನಸನು ಸ್ವಲ್ಪ ಹಗುರವಾಗಿಸುತ್ತದೆ. ಉತ್ತರ ಬರದಿದ್ದರೂ, ಕೇಳುವವರಿದ್ದಾರನ್ನುವ ಭಾವನೆ ಧೈರ್ಯ ಕೊಡುತ್ತದೆ.
ಅಪ್ಪನೆಂಬ ಆಸರೆ ಇಲ್ಲದ ಬದುಕು ನೋವಿನಿಂದ ಆರಂಭವಾದರೂ, ಅದು ನಿಲ್ಲುವುದು ನಿರಾಶೆಯಲ್ಲಿ ಅಲ್ಲ. ಆ ನೋವೇ ಸಂಕಲ್ಪವಾಗುತ್ತದೆ. “ನಾನು ಕುಗ್ಗುವುದಿಲ್ಲ” ಎಂಬ ಹಠವಾಗಿ ರೂಪುಗೊಳ್ಳುತ್ತದೆ. ಅಪ್ಪನಿಲ್ಲದ ಖಾಲಿತನವನ್ನು ಅವರ ಕನಸುಗಳನ್ನು ನೆರವೇರಿಸುವ ಮೂಲಕ ತುಂಬುವ ಪ್ರಯತ್ನವೇ ಜೀವನವಾಗುತ್ತದೆ.
ಅಂತಿಮವಾಗಿ ಅಪ್ಪ ಇಲ್ಲದಿದ್ದರೂ, ಅಪ್ಪನ ಹೆಸರಿನಲ್ಲಿ ಬದುಕು ಸಾಗುತ್ತದೆ. ಅವರ ನೆರಳು ಕಾಣದಿದ್ದರೂ, ಅವರ ಮೌಲ್ಯಗಳು ಹೆಜ್ಜೆಹೆಜ್ಜೆಗೂ ಜೊತೆಗಿರುತ್ತವೆ. ಹಾಗೆಯೇ ಆ ಬದುಕು ನೋವಿನೊಳಗೆ ಬೆಳೆದ, ಬಲದಿಂದ ಕಟ್ಟಿದ, ನೆನಪುಗಳಿಂದ ಬೆಳಗಿದ ಒಂದು ಮೌನದ ಜಯವಾಗುವುದು.

ಪ್ರಶಾಂತ್ ಎಂ.ಕಂಬಳಿ








