ಬೆಂಗಳೂರು: ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪರವಾಗಲಿ ಅಥವಾ ವಿರುದ್ಧವಾಗಲಿ ಶಾಸಕರು, ಸಚಿವರು ಯಾರೇ ಹೇಳಿಕೆ ನೀಡಿದರೂ ಅವು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳಿತಾಗುವುದಿಲ್ಲ ಎಂದರು.
ಕೆಲವು ಕಾಂಗ್ರೆಸ್ ನಾಯಕರು ‘ಶುಭಸುದ್ದಿ ತರುವಿರಿ’ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಪ್ರತಿದಿನವೂ ನನಗೆ ಶುಭದಿನವೇ. ಪ್ರತಿದಿನವೂ ಕಷ್ಟಗಳು, ಅಡಚಣೆಗಳು, ತೊಡಕುಗಳು ಇರುತ್ತವೆ. ಜನರ ಸಮಸ್ಯೆ ಬಗೆಹರಿಸಲು ಟೀಕೆಗಳನ್ನು ಎದುರಿಸಲೇಬೇಕು. ನಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಬೇಕು” ಎಂದು ಪ್ರತಿಕ್ರಿಯಿಸಿದರು.
ಹೈಕಮಾಂಡ್ ಗೊಂದಲವನ್ನು ಬೇಗ ಇತ್ಯರ್ಥ ಮಾಡಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಯಾವುದೇ ಗೊಂದಲವಿಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡಿದ್ದೇವೆ ಎಂಬುದು ನಮಗೆ ಸ್ಪಷ್ಟವಾಗಿದೆ. ನಾವಿಬ್ಬರು ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ. ಪಕ್ಷದ ವರಿಷ್ಠರೊಂದಿಗೆ ಎಲ್ಲರೂ ಸೇರಿ ಚರ್ಚಿಸಿದ್ದೇವೆ. ಇತರರು ಟೆನ್ಷನ್ ತೆಗೆದುಕೊಂಡು ಹೇಳಿಕೆ ಕೊಡುವುದರಿಂದ ಯಾರಿಗೂ ಪ್ರಯೋಜನವಿಲ್ಲ” ಎಂದು ಹೇಳಿದರು.
“ನಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ, ಯತೀಂದ್ರ ಮಾತನಾಡಿದರೆ ಏಕೆ ನೋಟಿಸ್ ನೀಡುವುದಿಲ್ಲ” ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರಶ್ನಿಸಿರುವ ಕುರಿತು ಕೇಳಿದಾಗ, “ಈ ವಿಚಾರವನ್ನು ಹೈಕಮಾಂಡ್‌ನಲ್ಲೇ ಕೇಳೋಣ” ಎಂದು ಉತ್ತರಿಸಿದರು.
ದೆಹಲಿಗೆ ತೆರಳಿದ ಬಳಿಕ ಸಾಧ್ಯವಾದಷ್ಟು ಎಲ್ಲ ನಾಯಕರನ್ನು ಭೇಟಿ ಮಾಡುತ್ತೇನೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸಮಯ ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ ಎಂದರು. ಇಂದು ಸಂಜೆ 4 ಗಂಟೆಗೆ ಎಐಸಿಸಿಯಲ್ಲಿ ಸಭೆ ನಡೆಯಲಿದ್ದು, ವಿವಿಧ ಚುನಾವಣೆಗಳು ಹಾಗೂ ರಾಜಕೀಯ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಯಲಿದೆ. ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿರುವುದರಿಂದ ಈ ಸಭೆಗೆ ನನ್ನನ್ನು ಕರೆಯಲಾಗಿದೆ ಎಂದು ತಿಳಿಸಿದರು.ಇದನ್ನು ಓದಿ –ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ
ಕೇರಳಕ್ಕೆ ತೆರಳಿದ ನಂತರ ಅಸ್ಸಾಂಗೂ ಹೋಗಬೇಕಿದೆ. ಇಂದು ಬಜೆಟ್ ಸಭೆ ಇರುವುದರಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೇನೆ. ಸೋಮವಾರ ಅಧಿಕಾರಿಗಳೊಂದಿಗೆ ಬಜೆಟ್ ಸಭೆ ನಡೆಸಿದ್ದೇನೆ; ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.








