ಬೆಂಗಳೂರು: ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಟಿಕೆಟ್ ವಿಚಾರದ ಚರ್ಚೆ ಕುರಿತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬರುವ ಐಪಿಎಲ್ ಪಂದ್ಯಗಳಿಗೆ ಶಾಸಕರು ಮತ್ತು ಅವರ ಕುಟುಂಬದವರಿಗೆ ಉಚಿತ ವಿಐಪಿ ಟಿಕೆಟ್ ನೀಡಬೇಕೆಂದು ಪಕ್ಷಭೇದ ಮರೆತು ಒತ್ತಾಯಿಸಿರುವುದು ದುರ್ಭಾಗ್ಯಕರ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜನರ ಜೀವ ಮುಖ್ಯವೋ ಅಥವಾ ವಿಐಪಿ ಟಿಕೆಟ್ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ. ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಯುವಕರು ಪ್ರಾಣ ಕಳೆದುಕೊಂಡ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ತಾಜಾ ಇದೆ. ಆ ಕುಟುಂಬಗಳ ನೋವು ಇಂದಿಗೂ ಕಡಿಮೆಯಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಆ ದುರಂತಕ್ಕೆ ಕಾರಣರಾದ ಆರ್‌ಸಿಬಿ ನಿರ್ವಹಣೆಯವರಾಗಲಿ ಅಥವಾ ಕೆಎಸ್‌ಸಿಎ ಸಂಸ್ಥೆಯಾಗಲಿ ಇದುವರೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಪೀಡಿತ ಕುಟುಂಬಗಳಿಗೆ ನ್ಯಾಯ ದೊರಕದಿರುವುದು ವ್ಯವಸ್ಥೆಯ ದೊಡ್ಡ ವೈಫಲ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಜನರ ತೆರಿಗೆ ಹಣದಿಂದ ಸೌಲಭ್ಯ ಪಡೆಯುತ್ತಿರುವ ಕೆಎಸ್‌ಸಿಎ ಸಂಸ್ಥೆ, ಅತಿ ಕಡಿಮೆ ಬಾಡಿಗೆಗೆ ಸರ್ಕಾರದ ಭೂಮಿಯನ್ನು ಬಳಸಿಕೊಂಡು ಸಾಮಾನ್ಯ ಜನರ ಸುರಕ್ಷತೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ಚರ್ಚೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.ಇದನ್ನು ಓದಿ –SSLC ಪರೀಕ್ಷೆ ಅಂಕಗಳಲ್ಲಿ ಬದಲಾವಣೆ: 625ರಿಂದ 525ಕ್ಕೆ ಇಳಿಕೆ
ಯುವಕರ ಜೀವಕ್ಕಿಂತ ಐಪಿಎಲ್ ಟಿಕೆಟ್‌ಗಳೇ ಮುಖ್ಯವೇ ಎಂಬ ಪ್ರಶ್ನೆ ಕೇಳಿದ ಅವರು, ಉಚಿತ ಟಿಕೆಟ್‌ಗಳಿಗಿಂತ ಆ 11 ಯುವಕರ ಸಾವಿಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಧಿಕಾರ ಜನರ ಸೇವೆಗೆ ಬಳಸಬೇಕೇ ಹೊರತು ಮೋಜು-ಮಸ್ತಿಗಾಗಿ ಅಲ್ಲ ಎಂದು ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.








