ನೀವು ನಿಮ್ಮ ಆಫ಼ೀಸು, ಕಂಪನಿ ಅಥವಾ ಕಚೇರಿಯ ಕೆಲಸದ ಬಿಜ಼ಿ ಶೆಡ್ಯೂಲ್ ನಲ್ಲಿದ್ದಾಗ ಅಥವಾ ಯಾವುದೋ ನಿತ್ಯ ವ್ಯವಹಾರದಲ್ಲಿ ನಿರತರಾಗಿದ್ದಾಗ ಅನೇಕ ಫೋನ್ ಕಾಲ್ ಗಳನ್ನು ರಿಸೀವ್ ಮಾಡುತ್ತಲಿರುತ್ತೀರಿ. ಅಂಥಾ ಸಂದರ್ಭಗಳ ಮಧ್ಯೆ ಒಂದೊಮ್ಮೆ ಮನೆಯಿಂದ ನಿಮ್ಮ ಸಂಗಾತಿಯ ಕರೆ ಬಂದಾಗ ಅದಕ್ಕೆ ಇತರೆ ಕರೆಗಳಿಗೆ ತೋರುವ ಕುತೂಹಲ, ಆಸಕ್ತಿ ಅಥವಾ ಫ಼ೋಕಸ್ ಇರಲು ಸಾಧ್ಯವೇ … ?
Of course, ಇದಕ್ಕೆ ಉತ್ತರ ವಿಭಿನ್ನವಾಗಿಯೇ ಇರುತ್ತೆ.
ಆದರೆ ಸಾಮಾನ್ಯವಾಗಿ ಬಹಳಷ್ಟು ಕೇಸುಗಳಲ್ಲಿ ಅಂತಹ ಸಮಯದಲ್ಲಿ ಇತರರ ಕರೆಗಳಿಗೆ ತೋರುವ ಅರ್ಧಭಾಗದ ಆಸಕ್ತಿಯನ್ನೂ ತೋರದೇ ಯಾಂತ್ರಿಕವಾಗಿ ರಿಸೀವ್ ಮಾಡಿ…..
” ಈಗ ಬಿಜ಼ಿ ಇದೀನಿ ಏನಾದ್ರೂ ಇದ್ರೆ ಅರ್ಜೆಂಟ್ ಹೇಳು, ಇಲ್ಲಾಂದ್ರೆ ನಾನೇ ಫ಼್ರೀಯಾದಾಗ ಕರೆ ಮಾಡುವೆ” ಎಂತಲೋ…
” ಏನಮ್ಮಾ…… ಎಷ್ಟು ಸಾರಿ ಹೇಳ್ತೀನಿ ಈ ಸಮಯದಲ್ಲಿ ಕಾಲ್ ಮಾಡ್ಬೇಡಾ ಅಂತ….ಆದ್ರೂ ಅರ್ಥ ಆಗೋಲ್ಲ ನಿನಗೆ. ಓಕೆ , ಅದೇನು ಬೇಗ ಹೇಳು, ಇಲ್ಲ ಸಂಜೆ ಮನೆಗೆ ಬಂದಾಗ ಮಾತಾಡೋಣ.”…. ಎನ್ನುತ್ತಲೋ ಅವರು ಮಾತನ್ನು ಆರಂಭಿಸಲು ಅವಕಾಶ ಕೊಡದೆಯೇ ತೀರ್ಮಾನ ಕೊಟ್ಟಿರುತ್ತೇವೆ. !
ಕೆಲವರು ಸಂಗಾತಿಯ ಕರೆ ರಿಸೀವ್ ಮಾಡುವ ಮುನ್ನವೇ ಮನದಲ್ಲೇ ” ಏನ್ ತಲೆ ತಿಂತಾಳ್ರೀ …..ಈಗಷ್ಟೇ ಮನೆಯಿಂದ ಬರುವಾಗ ಎಲ್ಲಾ ಮಾತನಾಡಿ ಬಂದಿದ್ದೇನೆ. ಮತ್ತೇ ಫೋನ್ ಮಾಡಿದ್ದಾಳೆ “….. ಎಂದು ಗೊಣಗುತ್ತಲೇ ಕರೆ ಸ್ವೀಕರಿಸೋದೂ ಉಂಟು !
ಆದರೆ ಅದೇ ಸಮಯದಲ್ಲಿ ಸಾಕಷ್ಟು ಅಫ಼ಿಷಿಯಲ್ ಅಥವಾ ಅನಫ಼ಿಷಿಯಲ್ ಕರೆಗಳೂ ಬರುತ್ತಲಿರುತ್ತವೆ. ಆದರೆ ಅವೆಲ್ಲವೂ ಮುಖ್ಯವಿರಲೀ….ಬಿಡಲೀ ಸ್ವಲ್ಪವೂ ಬೇಸರಿಸಿಕೊಳ್ಳದೇ ತಾಳ್ಮೆಯಿಂದಲೇ ಸ್ವೀಕರಿಸಿ ಉತ್ತರಿಸುತ್ತೇವೆ. ಅದಕ್ಕೆ ಕಾರಣಗಳು ಉದ್ದೇಶಗಳು ಸಾವಿರವಿದ್ದಿರಬಹುದು…ಆ ಮಾತು ಬೇರೆ !
ಈ ರೀತಿಯ ದೃಶ್ಯಾವಳಿಗಳು ಸಾಮಾನ್ಯವಾಗಿ ಮದುವೆಯಾಗಿ ಕೆಲವು ವರ್ಷಗಳಾಗಿರುವ ಜೋಡಿಗಳಲ್ಲಿದ್ದರೆ, ತೀರಾ ಇತ್ತೀಚೆಗಷ್ಟೇ ಮದುವೆಯಾದ ಯುವಜೋಡಿ ಮಾತ್ರ ಇದಕ್ಕಿಂತ ಸ್ವಲ್ಪ ಡಿಫ಼ರೆಂಟಾಗಿ ರಿಯಾಕ್ಟ್ ಮಾಡಬಹುದು. ಅಲ್ಲಿಗೆ ಒಂದಂಶ ಪಕ್ಕಾ ಆಗಿದ್ದೇನೆಂದರೆ ಇತರೆ ಫೋನ್ ಕಾಲ್ ಗಳನ್ನು ಆಸಕ್ತಿಯಿಂದ ಸ್ವೀಕರಿಸುವ ನಾವು ಮನೆಯಿಂದ ಬರುವ ಫೋನ್ ಕರೆಗಳನ್ನು ಅವು ಮುಖ್ಯವಲ್ಲದ, ತಲೆ ತಿನ್ನುವ ಅಥವಾ ಬೇಡವಾದ ಕರೆಗಳೆಂಬಂತೆ ಅನಾಮತ್ತು ಟ್ರೀಟ್ ಮಾಡುತ್ತೇವೆ ಅಥವಾ ಇನ್ನೂ ಒಂದರ್ಥದಲ್ಲಿ ಹೇಳಬೇಕೆಂದರೆ ಅವರನ್ನು ” ಟೇಕನ್ ಫ಼ಾರ್ ಗ್ರಾಂಟೆಡ್ ” ಎಂಬಂತೆ ವ್ಯವಹರಿಸುತ್ತೇವೆ.
ಇದು ಎಲ್ಲರಿಗೂ ಅನ್ವಯಿಸದಿದ್ದರೂ ಕೆಲವರಾದರೂ ತಮ್ಮ ಸಂಗಾತಿ ಅಥವಾ ಮನೆಯವರ ಕರೆಗಳ ಬಗೆಗೆ ಹೀಗೆ ಅನೇಕ ಸಂಧರ್ಭದಲ್ಲಿ ವರ್ತಿಸುವುದುಂಟು. !
( ಇಲ್ಲಿ ಸಂಗಾತಿ ಎಂಬುದನ್ನು ಗಂಡ -ಹೆಂಡತಿ ಇಬ್ಬರಿಗೂ ಸಮಾನವಾಗಿ ಅನ್ವಯಿಸಲಾಗಿದೆ. )
ಸಾಮಾನ್ಯವಾಗಿ ಮದುವೆಯಾಗಿ ಐದಾರು ವರ್ಷವಾಯಿತೆಂದರೆ ಸಾಕು, ಸಂಗಾತಿಯೆಡೆಗಿನ ಮೊದಲಿದ್ದ ಜೀವನೋತ್ಸಾಹ , ಅದೇ ಕುತೂಹಲ, ಅದೇ ಆಸಕ್ತಿ ಎಲ್ಲವೂ ಮನದೊಳಗೆ ಇದ್ದರೂ ಅದು ಅವರ ವರ್ತನೆಯಲ್ಲಿ ವ್ಯಕ್ತವಾಗದು. ಅಂದರೆ ಮನದ ಮೂಲೆಯಲ್ಲೆಲ್ಲೋ ಒಂದೆಡೆ ಸಂಗಾತಿಯೆಡೆಗೆ “ಚಲ್ತಾ ಹೈ” ಆಟಿಟ್ಯೂಡ್ ಅನ್ನೋದು ಒಬ್ಬರಿಗರಿವಿಲ್ಲದಂತೆಯೇ ಬೈ ಡೀಫ಼ಾಲ್ಟ್ ಮನದೊಳಗೇ ಸೇರಿಬಿಟ್ಟಿರುತ್ತದೆ. ಹೀಗಾಗಿಯೇ ಆಕೆಯ/ ಆತನ ಮಾತುಗಳು, ಸಲಹೆಗಳು, ಉಪದೇಶಗಳು ಅಥವಾ ಮಾರ್ಗದರ್ಶನಗಳೆಲ್ಲವೂ ಒಂಥರಾ ಸ್ಟೀರಿಯೋ ಟೈಪ್ ಆಗಿ ಮನದಲ್ಲಿ ರೆಕಾರ್ಡ್ ಆಗಿ ಕೂತು ಆ ತರಹದ ನೀರಸ ಫ಼ೀಲಿಂಗಿನಲ್ಲಿ ಆಟವಾಡಿಸಬಹುದು. !
ಇನ್ನೂ ಬಿಡಿಸಿ ಹೇಳಬೇಕೆಂದರೆ ತನ್ನ ಬಾಳ ಸಂಗಾತಿ ಇತರೆಯವರ ಮಾತಿಗೆ ತೋರಿಸೋ ಸಹಜ ಆಸಕ್ತಿ, ಕುತೂಹಲ, ನೀಡುವ ಬೆಲೆ , ಮಹತ್ವ ಇವುಗಳು ತನ್ನ ವಿಷಯದಲ್ಲಿ ಸವಕಲಾದಂತೆ ಆಕೆಗೆ ಅನಿಸುವಂತಾದಾಗ ತಾನೊಂಥರಾ ” ಅಮುಖ್ಯ ” ಎನಿಸಿ ಸಂಸಾರದ ಸರಿಗಮದಲ್ಲಿ ಕೆಲವೊಮ್ಮೆ ಅಪಸ್ವರಗಳು ಏಳಲಿಕ್ಕೂ ಅವು ಕಾರಣವಾಗಬಹುದು !
ಆಲ್ ರೈಟ್, ಏಳಲಿ ಬಿಡಿ….. ಎಂತಹಾ ಅಪಸ್ವರಗಳಾದರೂ ಅದನ್ನು ಸುಸ್ವರವನ್ನಾಗಿಸುವ ಜಾಣ್ಮೆ, ಕಲೆ ಅನ್ನೋದು ಇದ್ದಾಗ ಹಾಗೂ ಪರಸ್ಪರ ಭಾವನೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಹಾಗೂ ಹೊಂದಾಣಿಕೆ ಸ್ಟ್ರಾಂಗ್ ಆಗಿದ್ದಾಗ ನೀರಲ್ಲಿ ರಾಡಿಯಂತೇಳುವಂತಹಾ ಸನ್ನಿವೇಶಗಳು ದೊಡ್ಡ ಸಮಸ್ಯೆಯೇನಲ್ಲ. ಅವು ತಾವಾಗಿಯೇ ನಿಧಾನಕ್ಕೆ ನಿರ್ಮಲವಾಗಬಲ್ಲವು !
ನಾವೆಲ್ಲಾ ಯಾರಿಗಾಗಿ, ಏತಕ್ಕಾಗಿ ಅಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ದುಡಿಯುತ್ತೇವೆಯೋ ಗೊತ್ತಿಲ್ಲ, ಒಟ್ಟಾರೆ ಬಿಡುವಿಲ್ಲದ ಕೆಲಸ, ಹೆಚ್ಚಿನ ಕೌಟುಂಬಿಕ ಜವಾಬ್ದಾರಿ, ಅಸಂಖ್ಯಾತ ಫ಼್ರೆಂಡ್ಸ್ ಸರ್ಕಲ್, ನಮ್ಮದೇ ಆದ ಪ್ರವೃತ್ತಿ, ಮನರಂಜನೆಯ ದಾರಿ, ವಯಸ್ಸಾದಂತೆಲ್ಲಾ ಹೆಂಡತಿಯ ಪ್ರೀತಿಯಿಂದ ಮಕ್ಕಳ ಭವಿಷ್ಯದೆಡೆಗೆ ಡೀವಿಯೇಟ್ ಆಗುವ ಟೋಟಲ್ ಫ಼ೋಕಸ್, ಹಾಗೂ ಇವೆಲ್ಲದಕ್ಕೂ ಕಳಶವಿಟ್ಟಂತೆ ಅಂಗೈಯಲ್ಲಿ ಸದಾ ಕುಣಿಯುವ ಮೊಬೈಲ್ ಎಂಬ ಮಾಯಾಂಗಿನಿಯ ಪಾಶ. ಬಹುತೇಕ ಈ ಎಲ್ಲಾ ಬಿಜ಼ಿ ಅಂಶಗಳಿಂದ ಪಕ್ಕದಲ್ಲಿದ್ದರೂ ಮನದನ್ನೆಯ ಮೌಲ್ಯದ ಅರಿವು, ಆಗಬೇಕಾದಷ್ಟು ಪ್ರಮಾಣದಲ್ಲಿ ಆಗಿರಲಾರದು ಅಥವಾ ಆಗಿದ್ದರೂ ಅದು ಮುನ್ನೆಲೆಗೆ ಬಂದಿರಲಾರದು. !
ಹೀಗೆ ಮಾಡುವಾಗ ಸಂಸಾರದ ಬಂಡಿಯಲ್ಲಿ, ಮನೋರಮೆಯೊಂದಿಗೆ ಇಂತಹಾ ಮನೋಭಾವದಿಂದ ಸಾಗುವಾಗ ನಾವು ಒಂದು ವಿಷಯವನ್ನು ಮರೆತು ಪಕ್ಕಕ್ಕೆ ಸರಿಸಿಬಿಡುತ್ತೇವೆ. ಅದೇನು ಗೊತ್ತಾ..? ನಮ್ಮ ಜೀವನದ ಬೆಸ್ಟ್ ಫ಼್ರೆಂಡು ಅವಳೇ/ನೇ ಎಂಬ ಸಿಂಪಲ್ ಥಾಟ್ ಪ್ರಾಸೆಸ್ !
ಈ ಬಗ್ಗೆ ಯಾರಿಗೂ ಗೊತ್ತಿಲ್ಲವೆಂದಲ್ಲ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ನಮ್ಮ ಬಿಜ಼ಿ ಶೆಡ್ಯೂಲಿನಲ್ಲಿ ಪಕ್ಕಕ್ಕೆ ಸರಿದುಹೋಗುವ ಅನೇಕ ಸಂಗತಿಗಳಲ್ಲಿ ” ಸಂಗಾತಿಯ ನಿರ್ಲಕ್ಷ್ಯ” ಕೂಡಾ ಒಂದು. ಹೀಗೆ ಮಾಡುವಾಗ ನಮ್ಮಲ್ಲಿ ಬಹುತೇಕರಿಗೆ ಕೆಲ ವ್ಯಕ್ತಿಗಳ ಅಥವಾ ವಸ್ತುಗಳ ತಕ್ಕ ಬೆಲೆ ಅವು ಸನಿಹದಲ್ಲಿದ್ದಾಗ ಬಿಲ್ ಕುಲ್ ಗೊತ್ತಾಗೋದೇ ಇಲ್ಲ.
ಅಸಲಿಗೆ ಒಂದು ಐತಿಹಾಸಿಕ ಸತ್ಯವೇನು ಗೊತ್ತಾ !ಮನುಷ್ಯನ ದೇಹಕ್ಕೆ ವಯಸ್ಸಾದಂತೆಲ್ಲಾ, ಪ್ರಾಪಂಚಿಕ ಅನುಭವ ಹೆಚ್ಚಾದಂತೆಲ್ಲಾ, ನಿಧಾನಕ್ಕೆ ಆತನಿಗೆ ನನ್ನವರು ತನ್ನವರು ಯಾರೆಂಬ ಬಗೆಗೆ ಸ್ಪಷ್ಟ ಚಿತ್ರಣ ದೊರೆಯುವಂತಾದಾಗ, ಒಟ್ಟಾರೆಯಾಗಿ ಜಗತ್ತು ಏನೆಂದು ಅರಿವಿಗೆ ಬಂದಾಗ ಮಾತ್ರ ತನ್ನ ಸಂಗಾತಿಯ ಬೆಲೆ, ಮೌಲ್ಯ, ಮಹತ್ವ….ಬೇಡವೆಂದರೂ ನಿಧಾನಕ್ಕೆ ಬೆಳಕಿಗೆ ಬರುತ್ತದೆ. ಅವಳ/ನ ಸಲಹೆ, ಸಹಕಾರ, ಸಮಯಕ್ಕೆ ತಕ್ಕಂತೆ ನೀಡಿದ ಉಪದೇಶ, ಸದಾ ಸಂಗಾತಿಯೆಡೆಗಿರುವ ಒಲವು ಇವೆಲ್ಲವೂ ಪರಸ್ಪರ ಸಾಮಿಪ್ಯದ ಗಟ್ಟಿ ಬಾಂಡೇಜ್‌ನ ಅತಿದೊಡ್ಡ ಮೌಲ್ಯವೆನಿಸಿಬಿಡುತ್ತದೆ. ಮೇಲಾಗಿ ಜೀವನದಲ್ಲಿ ಅಲ್ಲಿಯವರೆಗೂ ಸಿಕ್ಕ ಸ್ನೇಹ- ಬಂಧುತ್ವವೆಲ್ಲಾ ಕೇವಲ ಆ ಹಂತದಲ್ಲಿ ಉಕ್ಕಿಸಿದ ಜೋಷ್ ಅಥವಾ ಆ ಸಂಧರ್ಭದಲ್ಲಿ ಟೆಂಪೊರೆರಿ ಖುಷಿ ಕೊಡುವ ಓಪನ್ ಮಾಡಿದ ಬಿಯರ್ ಬಾಟಲ್ ನಂತಿದ್ರೆ , ಮನದನ್ನೆಯ ಸ್ನೇಹವೆಂಬುದು ಹಳೆಯ ವೈನಿನಂತೆ ತನ್ನ ಪ್ರಾಮುಖ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ. ಆಗಮಾತ್ರ “ಜೋಷ್” ಗಿಂತ “ಹೋಷ್” ಹೆಚ್ಚು ಕೆಲಸ ಮಾಡಬಲ್ಲದೆಂಬ ನೈಜ ತಿಳಿವಳಿಕೆಯೂ ಮೂಡುತ್ತದೆ.
ಮೈಂಡ್ ಯೂ….ನಿಮ್ಮ ಕಷ್ಟಕ್ಕೆ ಹೆಗಲಾಗಲು, ಕಣ್ಣೀರಿಗೆ ಆಸರೆಯಾಗಲು, ನೋವಿಗೆ ದನಿಯಾಗಲು, ನಗುವಿಗೆ ಮಗುವಾಗಲು, ಸಮಸ್ಯೆಗಳಿಗೆ ಸಮಾಧಾನವಾಗಲು, ಇಡೀ ಜಗತ್ತೇ ನಿಮಗೆದುರಾಗಿ ನಿಂತಾಗ ನಿಮ್ಮ ಪಕ್ಕದಲ್ಲಿ ಕೈಹಿಡಿದು ನಿಂತು ಬೆಚ್ಚನೆಯ ಭರವಸೆ ತುಂಬಲು ಇರುವ ಏಕ ಮಾತ್ರ ಫ಼್ರೆಂಡು ಅದು…ನಿಮ್ಮ ಸಂಗಾತಿ ಮಾತ್ರವೇ. !
ಬಾಳ ಸಂಗಾತಿಯ ಮಹತ್ವವನ್ನರಿಯಲು ವಯಸ್ಸಾಗುವವರೆಗೂ ಕಾಯುವುದೇಕೆ ? ಈಗಲೇ ಹೇಳಿಬಿಡಿ…
“ಒಲವೇ ನಿನ್ನ ಗೆಲುವೊಂದೇ ಬಲವೆನ್ನುತ ನಾ ಬೆರೆವೆ”.
ನಾನು ಬಹಳಷ್ಟು ಜನರನ್ನು ಹತ್ತಿರದಿಂದ ನೋಡಿದ್ದೇನೆ, ನೋಡುತ್ತಲೇ ಇದ್ದೇನೆ, ಅವರಿವರ ಬಾಯಿಂದ ಕೇಳಿದ್ದೇನೆ. ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲರಿಂದ ಮೋಸ ಹೋದಾಗ ಅಥವಾ ಪ್ರಮುಖರೆನಿಸಿದವರು, ಆಪ್ತರೆನಿಸಿದವರು, ನಂಬಿದವರೆಲ್ಲಾ ಕೈಕೊಟ್ಟಾಗ ಕೊನೆಗೆ ಅವನಿಗೆ ನೆನಪಾಗುವುದೇ ಆತನ ಸಂಗಾತಿಯ ಸೇಫ಼್ ಸಾಮೀಪ್ಯ.
ವಿಪರ್ಯಾಸವೆಂದರೆ ಎಲ್ಲವೂ ಎಲ್ಲರೂ ಚೆನ್ನಾಗಿದ್ದಾಗ ಈ ಫ಼ೀಲಿಂಗ್ ಬರೋದು ಕಡಿಮೆ. ವಯಸ್ಸು ಮಾಗಿದಂತೆಲ್ಲಾ ಸಂಗಾತಿಯೆಂದರೆ ಸೇಫ಼್ ಜ಼ೋನ್ ಎಂಬ ಜ್ಞಾನೋದಯ ನಿಧಾನಕ್ಕೆ ಬಲವಾಗುತ್ತದೆ. ಏಕೆಂದರೆ ಈ ನಂಬಿಕೆಯಡಿಯಲ್ಲಿ ಸುಳ್ಳು, ಮೋಸ, ವಂಚನೆ, ಕಪಟ ಇವುಗಳ ಭಯವಿರಲಾರದು ಅಥವಾ ಕೆಲವರಲ್ಲಿ ಇದ್ದರೂ ಅದರ ಎಫ಼ೆಕ್ಟು ಅತೀ ಕಡಿಮೆ. ಇವುಗಳ ಜಾಗದಲ್ಲಿ ದೇಹವೆರೆಡು ಪ್ರಾಣವೊಂದೇ ಎಂಬ ಭಾವನಾತ್ಮಕ ಬೆಸುಗೆ ಬಲವಾಗಿ ಅಂಟಿಕೊಂಡಿರಬಲ್ಲದು !
ಎಂದೋ ಯಾವಾಗಲೋ ವರ್ಷಗಳುರುಳಿದ ನಂತರ ಸಂಗಾತಿಯ ಮಹತ್ವ ಅರಿತುಕೊಳ್ಳುವ ಸಂಧರ್ಭಕ್ಕೆ ಕಾಯುವ ಬದಲು, ತೆರೆದ ಹೃದಯದಿಂದ ಮುಕ್ತ ಮನದಿಂದ ನಿಮ್ಮೊಲವಿನ ಬಲವೇನೆಂಬುದನ್ನು ಅರಿತಲ್ಲಿ, ಆ ಒಲವಲ್ಲಿ ಪರಸ್ಪರ ನಂಬಿಕೆಯ, ಹೊಂದಾಣಿಕೆಯ ಬಲವೂ ಬೆರೆತಲ್ಲಿ ಬದುಕೆಂಬುದು ಸದಾ ಹಸಿರು.

ಹಿರಿಯೂರು ಪ್ರಕಾಶ್.








