ಬೆಂಗಳೂರು: ನಿರ್ಗಮಿತ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಆಗಲಿದ್ದಾರೆ ಎಂಬ ಮಾತನ್ನು ಊಹಾಪೋಹ ಎಂದು ಸತೀಶ್ ಅವರು ತಳ್ಳಿಹಾಕಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ದೆಹಲಿಯಿಂದ ಹಿಂದಿರುಗಿದ ನಂತರವೇ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪಕ್ಷದ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಅವರು ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡರೂ ನಾನು ಸ್ವೀಕರಿಸುತ್ತೇನೆ. ಸಿದ್ದರಾಮ್ಯ ದೆಹಲಿಯಿಂದ ವಾಪಾಸ್ಸಾದ ನಂತರ ಸೋ ಮಾತುಕತೆಯ ಸಮಯದಲ್ಲಿ ಏನಾಯಿತು ಎಂಬ ಕುರಿತು ಚರ್ಚಿಸುತ್ತೇವೆ. ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಜಾರಕಿಹೊಳಿ ಹೇಳಿದರು.
ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಪುಟ ರಚನೆಯ ಕುರಿತು ಚರ್ಚೆಗಳು ಇನ್ನೂ ಆರಂಭವಾಗಿಲ್ಲ. ಚರ್ಚೆಗಳು ನಡೆದಾಗ, ಈ ವಿಷಯದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಹೊಸ ಸರ್ಕಾರದ ಸಂಭಾವ್ಯ ಸಂಪುಟ ರಚನೆ, ಉಪಮುಖ್ಯಮಂತ್ರಿಗಳ ಸಂಖ್ಯೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.ಇದನ್ನು ಓದಿ – ದೇವರು ವರ-ಶಾಪ ನೀಡಲ್ಲ: ಸಿದ್ದರಾಮಯ್ಯರನ್ನು ಹೊಗಳಿದ ಡಿಕೆಶಿ
ಶನಿವಾರ ಸಂಜೆಯ ವೇಳೆಗೆ ಚಿತ್ರಣ ಸ್ಪಷ್ಟವಾಗುತ್ತದೆ. ಎಷ್ಟು ಡಿಸಿಎಂ ನೇಮಿಸಲಾಗುತ್ತದೆಯೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಸಿದ್ಧತೆಗಳು ಸರಳವಾಗಿರುತ್ತವೆ. ಸೋಮವಾರದ ಒಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.








