ಮಂಡ್ಯ: ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಪ್ರಯತ್ನ ಆರಂಭಿಸಿದ್ದು, ರಾಜ್ಯಸಭೆ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಸುಮಲತಾ, ಇದೀಗ ರಾಜ್ಯಸಭೆ ಚುನಾವಣೆಯ ಹಿನ್ನೆಲೆ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ತಮಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಬೆಂಬಲಿಗರ ಮೂಲಕ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.
ಕ್ಷೇತ್ರ ತ್ಯಾಗಕ್ಕೆ ಪ್ರತಿಫಲದ ನಿರೀಕ್ಷೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಮನವಿಯ ಮೇರೆಗೆ ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಆ ವೇಳೆ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಬಳಿಕ ಪಕ್ಷದಿಂದ ನಿರೀಕ್ಷಿತ ಗೌರವ ಸಿಗಲಿಲ್ಲ ಎಂಬ ಅಸಮಾಧಾನ ಅವರ ಬೆಂಬಲಿಗರಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಸುಮಲತಾ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಈಗ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ಇದನ್ನು ಓದಿ –ರಾಜ್ಯಕ್ಕೆ ಮುಂಗಾರು ಎಂಟ್ರಿ; ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ
ರಾಜ್ಯಸಭೆ ಟಿಕೆಟ್‌ಗಾಗಿ ನಡೆಯುತ್ತಿರುವ ಈ ಬೆಳವಣಿಗೆಗಳು ಬಿಜೆಪಿ ಪಾಳಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.








