ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಕಂಬಳ ಪ್ರದರ್ಶನ ಆಯೋಜಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದ್ದು, ಇದರ ಬೆನ್ನಲ್ಲೇ ಮೈಸೂರಿನ ಹೊರವಲಯದ ಸಾತಗಳ್ಳಿಯಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ.
ಕಂಬಳ ಆಯೋಜನೆಗೆ ಗುರುತಿಸಲಾಗಿರುವ ಸುಮಾರು 20 ಎಕರೆ ಪ್ರದೇಶವು ದಟ್ಟ ಹಸಿರು ವಾತಾವರಣದಿಂದ ಕೂಡಿದ್ದು, ವಿವಿಧ ಜಾತಿಯ 150ಕ್ಕೂ ಹೆಚ್ಚು ಬೃಹತ್ ಗಾತ್ರದ ಮರಗಳು ಈ ಪ್ರದೇಶದಲ್ಲಿವೆ. ಕಂಬಳ ಕರೆಯನ್ನು ನಿರ್ಮಿಸಲು ಈ ಮರಗಳನ್ನು ತೆರವುಗೊಳಿಸುವ ಸಿದ್ಧತೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ವಿರೋಧಿಸಿ ಪರಿಸರವಾದಿಗಳು, ಸಾರ್ವಜನಿಕರು ಹಾಗೂ ಬಿಜೆಪಿ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.ಇದನ್ನು ಓದಿ –ಕಚ್ಚಾ ತೈಲ ಬೆಲೆಯಲ್ಲಿ ಶೇ.4ಕ್ಕೂ ಹೆಚ್ಚು ಏರಿಕೆ
ಆದರೆ, ಸರ್ಕಾರ ಕಂಬಳ ಆಯೋಜನೆಯ ಸಿದ್ಧತೆಯನ್ನು ಮುಂದುವರಿಸಿದ್ದು, ದಸರಾ ಅಂಗವಾಗಿ ಕಾರ್ಯಕ್ರಮವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಧ್ಯೆ, ಮರಗಳ ತೆರವು ಹಾಗೂ ಪರಿಸರದ ಮೇಲೆ ಬೀರುವ ಪರಿಣಾಮದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.








