ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ಸರ್ಕಾರದ ಒತ್ತಡದ ಮೇರೆಗೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಡದಿಯಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದಿಂದ ಪ್ರತಿಕ್ರಿಯೆ ನೀಡಿದ ಅವರು, ಕಳೆದ 500 ದಿನಗಳಿಂದ ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರು. ಆದರೆ, ಏಕಾಏಕಿ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆದಿವೆ. ಈ ಬೆಳವಣಿಗೆಗೆ ಸರ್ಕಾರದ ಪ್ರಚೋದನೆಯೇ ಕಾರಣ ಎಂದು ಆರೋಪಿಸಿದರು.
ರೈತರು ಯಾವುದೇ ಕಾರಣಕ್ಕೂ ಹಿಂಸೆಯ ಮಾರ್ಗ ಅನುಸರಿಸದೆ ಶಾಂತಿಯುತ ಹೋರಾಟವನ್ನು ಮುಂದುವರಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು. ಕಾನೂನುಬದ್ಧವಾಗಿ ರೈತರ ಪರವಾಗಿ ಹೋರಾಡಲು ಹಲವರು ಸಿದ್ಧರಿದ್ದು, ಸರ್ಕಾರದ ದೌರ್ಜನ್ಯಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ ಅವರು, ಸರ್ಕಾರದ ಒತ್ತಡಕ್ಕೆ ಮಣಿದು ರೈತ ವಿರೋಧಿ ಕ್ರಮ ಕೈಗೊಳ್ಳಬಾರದು ಎಂದು ಸಲಹೆ ನೀಡಿದರು. ಸರ್ಕಾರದ ದುರುಪಯೋಗಕ್ಕೆ ಅಧಿಕಾರಿಗಳು ಸಹಕರಿಸಿದರೆ ಅದರ ಹೊಣೆಗಾರಿಕೆಯನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಬಹುದು.ಇದನ್ನು ಓದಿ – ದಸರಾ ಕಂಬಳಕ್ಕೆ ಹಸಿರು ನಾಶ ?
ಆದ್ದರಿಂದ ಕಾನೂನು ಮತ್ತು ನ್ಯಾಯದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಕುಮಾರಸ್ವಾಮಿ ಸೂಚಿಸಿದರು.








