ಕಲಬುರಗಿ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಸೇರಿದಂತೆ ಇಬ್ಬರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷಗಳ ಸಜೆ ಹಾಗೂ ತಲಾ ₹20 ಸಾವಿರ ದಂಡ ವಿಧಿಸಿದೆ.
ಶಿಕ್ಷೆಗೆ ಗುರಿಯಾದವರಲ್ಲಿ 2017ರಲ್ಲಿ ಅಫಜಲಪುರ ತಹಶೀಲ್ದಾರ್ ಆಗಿದ್ದ ಶಶಿಕಲಾ ಪಾದಗಟ್ಟಿ ಹಾಗೂ ಲಂಚದ ಹಣವನ್ನು ಮಧ್ಯವರ್ತಿಯಾಗಿ ಸ್ವೀಕರಿಸಿದ್ದ ಶಿವಾನಂದ ಜಮಖಂಡಿ ಸೇರಿದ್ದಾರೆ. ಶಶಿಕಲಾ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ವಾರ ರಾಜ್ಯ ಸರ್ಕಾರ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿತ್ತು.
ಪ್ರಕರಣದ ಹಿನ್ನೆಲೆ
ಅಫಜಲಪುರ ತಾಲ್ಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ಶಿವಲಿಂಗಯ್ಯ ಬಸಯ್ಯ ಮಠ ಅವರು ಹಣ ಪಡೆದು ಕೆಲಸ ಮಾಡಿಕೊಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ತಹಶೀಲ್ದಾರ್‌ಗೆ ಸಲ್ಲಿಕೆಯಾಗಿತ್ತು.
ಈ ಪ್ರಕರಣದಲ್ಲಿ ನೆರವು ನೀಡುವಂತೆ ಶಿವಲಿಂಗಯ್ಯ ಮನವಿ ಮಾಡಿದಾಗ, ಸಮಸ್ಯೆ ಬಗೆಹರಿಸಲು ₹1 ಲಕ್ಷ ಲಂಚ ನೀಡುವಂತೆ ಶಶಿಕಲಾ ಪಾದಗಟ್ಟಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ಹಣವನ್ನು ಶಿವಾನಂದ ಜಮಖಂಡಿಗೆ ನೀಡುವಂತೆ ಸೂಚಿಸಿದ್ದು, ಹಣ ನೀಡದಿದ್ದರೆ ಬೇರೆ ವ್ಯಕ್ತಿಯನ್ನು ನೇಮಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರೆಂದು ಆರೋಪಿಸಲಾಗಿತ್ತು.
ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು
ಈ ಬಗ್ಗೆ ಶಿವಲಿಂಗಯ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ 2017ರ ಆಗಸ್ಟ್ 31ರಂದು ಶಿವಲಿಂಗಯ್ಯ ನೀಡಿದ ₹1 ಲಕ್ಷ ಲಂಚದ ಹಣವನ್ನು ಶಿವಾನಂದ ಜಮಖಂಡಿ ಸ್ವೀಕರಿಸಿ ತಹಶೀಲ್ದಾರ್‌ಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿದ್ದು, ತನಿಖಾಧಿಕಾರಿ ಕೃಷ್ಣಪ್ಪ ಕಲ್ಲದೇವರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಇಬ್ಬರು ಆರೋಪಿಗಳೂ ಅಪರಾಧಿಗಳು ಎಂದು ತೀರ್ಮಾನಿಸಿ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದ್ದಾರೆ. ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್. ಚಾಂದಕವಠೆ ಸರ್ಕಾರದ ಪರ ವಾದ ಮಂಡಿಸಿದರು.



