- ಅಧ್ಯಯನ ಬಳಿಕ ಕ್ರಮ
ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯೋಜನೆಗೆ ವಿರೋಧವಾಗಿ ರೈತರು ಹಾಗೂ ವಿವಿಧ ಸಂಘಟನೆಗಳು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಲಾಗಿದೆ.
ಈ ಹಿನ್ನೆಲೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಇಂದು ಪ್ರತಿಕ್ರಿಯೆ ನೀಡಿ, ಸದನದಲ್ಲೇ ಈ ವಿಷಯಕ್ಕೆ ಸ್ಪಷ್ಟ ಉತ್ತರ ನೀಡಿರುವುದಾಗಿ ಹೇಳಿದರು. ಬಲ್ಡೋಟಾ ಕಾರ್ಖಾನೆಗೆ ಅನುಮತಿ ನೀಡಿರುವುದು ಕೇಂದ್ರ ಸರ್ಕಾರವಾಗಿದ್ದು, ಮಾಲಿನ್ಯ ಉಂಟುಮಾಡುವ ಯಾವುದೇ ಕೈಗಾರಿಕೆಗೆ ರಾಜ್ಯ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಳದಲ್ಲಿ ಉಂಟಾಗಿರುವ ಮಾಲಿನ್ಯ ಕುರಿತು ಸಮಗ್ರ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರ ನೆರವು ಪಡೆಯಲಾಗುತ್ತಿದೆ. ಅವರ ವರದಿ ಆಧರಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದಕ್ಕೆ ವಿರೋಧವಾಗಿ ಕೊಪ್ಪಳದ ರೈತರು ಗವಿಮಠದಿಂದ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದ ಬೆಳೆಗಳು ಹಾನಿಗೊಳಗಾಗಿವೆ ಎಂದು ಅವರು ಆರೋಪಿಸಿದರು.ಇದನ್ನು ಓದಿ –ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ – ಸಚಿವ ಖಂಡ್ರೆ
ಕಳೆದ ಒಂದು ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ಹೊಗೆ ಹಾಗೂ ಧೂಳಿನಿಂದ ಬೆಳೆಯು ಸಂಪೂರ್ಣ ನಾಶವಾಗಿದೆ ಎಂದು ರೈತರು ದೂರಿದರು. ತಮ್ಮ ಹಾನಿಗೊಂಡ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ತಂದು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.








