ನವದೆಹಲಿ: ರಾಜ್ಯ ಸರ್ಕಾರಗಳಿಂದ ನಿಷೇಧ ಎದುರಿಸುತ್ತಿರುವ ನಡುವೆಯೇ, ಬೈಕ್ ಟ್ಯಾಕ್ಸಿ ಸೇವೆಗಳಿಗೆ ಕೇಂದ್ರ ಸರ್ಕಾರದಿಂದ ಅಸ್ತು ಸಿಕ್ಕಿದ್ದು, ಇದರ ಕುರಿತು ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ.
ಕಳೆದ ಜೂನ್ 16ರಿಂದ ಕರ್ನಾಟಕ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ಈ ಕುರಿತು ಭಾರಿ ಪ್ರತಿಭಟನೆ ನಡೆಯುತ್ತಿರುವ ಸಮಯದಲ್ಲೇ ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿಗೆ ಅಧಿಕೃತ ಅನುಮತಿ ನೀಡಿದ್ದು, 1988ರ ಮೋಟಾರು ವಾಹನ ಕಾಯ್ದೆಯಡಿ 2025ರ ಅಗ್ರಿಗೇಟರ್ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:
- ರಾಜ್ಯ ಸರ್ಕಾರಗಳು ಖಾಸಗಿ ಬೈಕ್‌ಗಳನ್ನು ಅಗ್ರಿಗೇಟರ್ ಸೇವೆಗಳ ಮೂಲಕ ಪ್ರಯಾಣಿಕರ ಸಾರಿಗೆಗೆ ಬಳಸಲು ಅನುಮತಿ ನೀಡಬಹುದು.
- ಇದರ ಮೂಲಕ ಸಂಚಾರದ ದಟ್ಟಣೆ, ಮಾಲಿನ್ಯವನ್ನು ಕಡಿಮೆ ಮಾಡಬಹುದು ಹಾಗೂ ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಪ್ರಯಾಣ ಸೌಲಭ್ಯ ಒದಗಿಸಲು ಸಹಾಯವಾಗುತ್ತದೆ.
- ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67(3) ಅಡಿಯಲ್ಲಿ ಈ ಅನುಮತಿಯನ್ನು ನೀಡಬಹುದು.
- ಅಗ್ರಿಗೇಟರ್ ಸೇವೆಗಳಿಗೆ ದಿನನಿತ್ಯ, ವಾರದ ಅಥವಾ ಹದಿನೈದು ದಿನಗಳ ಅನುಮತಿಗಾಗಿ ಶುಲ್ಕ ವಿಧಿಸಬಹುದಾಗಿದೆ.
ಇದನ್ನು ಓದಿ –ಗಡಿ ಉಸ್ತುವಾರಿ ಸಚಿವರಾಗಿ ಹೆಚ್.ಕೆ. ಪಾಟೀಲ್ ನೇಮಕ
ಈ ಮೂಲಕ ಕೇಂದ್ರ ಸರ್ಕಾರ ಮೊದಲ ಬಾರಿಗೆ ಖಾಸಗಿ ಬೈಕ್‌ಗಳ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಪ್ರೋತ್ಸಾಹ ನೀಡಿದ್ದು, ಇದರಿಂದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ದಾರಿ ತೆರೆದಿದೆ.