ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ತೈಲ ಮಾರಾಟ ಕಂಪನಿಗಳು ಮತ್ತೊಮ್ಮೆ ಇಳಿಕೆ ಮಾಡಿವೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಳಿಕ ಇದು ಎರಡನೇ ಬಾರಿಗೆ ದರ ಕಡಿತಗೊಂಡಿದ್ದು, ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ತಂದಿದೆ.
19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹209ರಷ್ಟು ಇಳಿಕೆ ಮಾಡಲಾಗಿದ್ದು, ಹೊಸ ದರ ₹2,872 ಆಗಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ತಗ್ಗಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಂಡಿವೆ.
ಇನ್ನು 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗೃಹಬಳಕೆಯ ಸಿಲಿಂಡರ್ ದರ ₹942ರಲ್ಲೇ ಮುಂದುವರಿದಿದೆ. ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ಬದಲಾವಣೆ ಇಲ್ಲ.
ಜುಲೈ 1ರಂದು ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹183.50ರಷ್ಟು ಇಳಿಕೆ ಮಾಡಲಾಗಿತ್ತು. ಕಳೆದ ತಿಂಗಳು ಈ ಸಿಲಿಂಡರ್ ದರ ₹3,113ಕ್ಕೆ ಏರಿಕೆಯಾಗಿದ್ದರೆ, ಇದೀಗ ಸತತ ಎರಡನೇ ಬಾರಿ ದರ ಇಳಿಕೆಯಾಗಿದೆ.



