ನವದೆಹಲಿ: ಸರ್ಕಾರಿ ಉದ್ಯೋಗಗಳ ನಕಲಿ ನೇಮಕಾತಿ ಪತ್ರಗಳನ್ನು ಹಂಚಿ ಹಣ ಅಕ್ರಮ ವರ್ಗಾವಣೆ ನಡೆಸಲಾಗಿದೆ ಎನ್ನಲಾದ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಗುರುವಾರ ಆರು ರಾಜ್ಯಗಳ 15 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಈ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರಂಭಿಕ ತನಿಖೆಯಲ್ಲಿ ರೈಲ್ವೆ ಇಲಾಖೆಯ ಹೆಸರಿನಲ್ಲಿ ನಕಲಿ ನೇಮಕಾತಿ ನಡೆದಿದೆ ಎಂಬುದು ಪತ್ತೆಯಾಗಿತ್ತು. ಆದರೆ, ವಿಸ್ತೃತ ತನಿಖೆ ನಡೆಸಿದಾಗ ಅರಣ್ಯ ಇಲಾಖೆ, ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ), ಅಂಚೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಕೆಲವು ಹೈಕೋರ್ಟ್‌ಗಳು, ಸಾರ್ವಜನಿಕ ಕಾಮಗಾರಿಗಳ ಇಲಾಖೆ (ಪಿಡಬ್ಲ್ಯೂಡಿ), ಬಿಹಾರ ಸರ್ಕಾರ, ದೆಹಲಿ ಅಭಿವೃದ್ಧಿ ಪ್ರಾಧಿಕಾರ, ರಾಜಸ್ಥಾನ ಸಚಿವಾಲಯ ಸೇರಿದಂತೆ 40ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಈ ನಕಲಿ ನೇಮಕಾತಿ ಹಗರಣ ನಡೆದಿರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ವಿವಿಧ ಸರ್ಕಾರಿ ಇಲಾಖೆಗಳ ಅಧಿಕೃತ ಇ–ಮೇಲ್ ಐಡಿಗಳಿಗೆ ಹೋಲುವಂತೆ ನಕಲಿ ಇ–ಮೇಲ್ ಖಾತೆಗಳನ್ನು ಸೃಷ್ಟಿಸಿ, ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದರು. ಕೆಲವರಿಗೆ ನಕಲಿ ನೇಮಕಾತಿ ಪತ್ರಗಳನ್ನು ಕಳುಹಿಸಿ, ಮೂರು ತಿಂಗಳವರೆಗೆ ವೇತನವನ್ನೂ ಪಾವತಿಸಿ ನಂಬಿಕೆ ಮೂಡಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.ಇದನ್ನು ಓದಿ –ಜೆಡಿಎಸ್–ಬಿಜೆಪಿ ವಿಲೀನ ಸಾಧ್ಯತೆ: ಡಿಕೆಶಿ
ಈ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಮುಜಾಫರ್‌ಪುರ ಮತ್ತು ಮೋತಿಹಾರಿ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಕೇರಳದ ಎರ್ನಾಕುಲಂ, ಪಂದಳಂ, ಅಡೂರ್, ಕೋಡೂರ್, ತಮಿಳುನಾಡಿನ ಚೆನ್ನೈ, ಗುಜರಾತ್‌ನ ರಾಜ್‌ಕೋಟ್ ಹಾಗೂ ಉತ್ತರ ಪ್ರದೇಶದ ಗೋರಖ್‌ಪುರ, ಪ್ರಯಾಗ್‌ರಾಜ್ ಮತ್ತು ಲಖನೌ ನಗರಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.








