- ಐಷಾರಾಮಿ ಲುಕ್, ಮನೆಯ ರುಚಿ
- ಅತೀ ಕಡಿಮೆ ದರದಲ್ಲಿ ಆಹಾರ
ಮೈಸೂರು ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಅಕ್ಕ ಕೆಫೆ’ ಅಧಿಕೃತವಾಗಿ ಆರಂಭಗೊಂಡಿದೆ. ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಈ ಕೆಫೆ ಕಾರ್ಯಾರಂಭ ಮಾಡಿದ್ದು, ಇದರ ವಿಶೇಷವೆಂದರೆ ಐವರು ಗ್ರಾಮೀಣ ಮಹಿಳೆಯರು ಈ ಕೆಫೆಯನ್ನು ಸಂಪೂರ್ಣವಾಗಿ ಮುನ್ನಡೆಸುತ್ತಿದ್ದಾರೆ. ಮಹಿಳಾ ಸ್ವಾವಲಂಬನೆಗೆ ಇದು ಹೊಸ ಮೈಲಿಗಲ್ಲಾಗಿ ಪರಿಣಮಿಸಿದೆ.
ರಾಜ್ಯ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದ ಮಹಿಳಾ ಸಬಲೀಕರಣದ ಯೋಜನೆ ಇದೀಗ ವಾಸ್ತವ ರೂಪ ಪಡೆದಿದೆ. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಅಕ್ಕ ಕೆಫೆಗಳನ್ನು ಆರಂಭಿಸುವ ಸರ್ಕಾರದ ಯೋಜನೆಯ ಭಾಗವಾಗಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲೆಯ ಮೊದಲ ಅಕ್ಕ ಕೆಫೆ ಅದ್ಧೂರಿಯಾಗಿ ಆರಂಭವಾಗಿದೆ. ನಗರದಲ್ಲಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ಮತ್ತೊಂದು ಅಕ್ಕ ಕೆಫೆ ಕಟ್ಟಡ ಕೂಡ ಸಿದ್ಧವಾಗಿದ್ದು, ಶೀಘ್ರದಲ್ಲೇ ಅದನ್ನು ಉದ್ಘಾಟಿಸುವ ಯೋಜನೆ ಇದೆ.
ಈ ಕೆಫೆಯ ಮುಖ್ಯ ವಿಶೇಷತೆ ಎಂದರೆ, ನಾಗವಾಳ ಗ್ರಾಮದ ಶ್ರೀಗಂಗಾ ಸ್ತ್ರೀ ಶಕ್ತಿ ಸಂಘದ ಐವರು ಮಹಿಳೆಯರು ಇದರ ಮಾಲೀಕರು ಮತ್ತು ನಿರ್ವಾಹಕರು. ಗ್ರಾಮೀಣ ಮಹಿಳೆಯರೇ ಈ ಉದ್ಯಮವನ್ನು ಮುನ್ನಡೆಸುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಯೋಜನೆಯಡಿ ಸರ್ಕಾರವು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದೆ. ಜೊತೆಗೆ ಮಹಿಳೆಯರು ಸಂಜೀವಿನಿ ಒಕ್ಕೂಟದಿಂದ ಸುಮಾರು 2 ಲಕ್ಷ ರೂ. ಸಾಲ ಪಡೆದು ಈ ಉದ್ಯಮವನ್ನು ಆರಂಭಿಸಿದ್ದಾರೆ.
ನೋಡುವುದಕ್ಕೆ ಈ ಕೆಫೆ ಐಷಾರಾಮಿ ರೆಸ್ಟೋರೆಂಟ್‌ನಂತೆ ಕಾಣುತ್ತದೆ. ಆದರೆ ಇಲ್ಲಿನ ಆಹಾರದ ದರ ಮಾತ್ರ ಸಾಮಾನ್ಯ ಹೋಟೆಲ್‌ಗಳಿಗಿಂತ ಕಡಿಮೆ. ಸರ್ಕಾರದ ಅನುದಾನದಿಂದ ನಿರ್ಮಿಸಲಾದ ಈ ಪ್ರೀಮಿಯಂ ಕೆಫೆಯಲ್ಲಿ ಹೈಟೆಕ್ ಇಂಟೀರಿಯರ್, ಸುಸಜ್ಜಿತ ನೆಲಹಾಸು, ಗೋಡೆ ಮತ್ತು ಛಾವಣಿ ವಿನ್ಯಾಸ, ಸ್ಟೋರೇಜ್ ಕ್ಯಾಬಿನೆಟ್‌ಗಳು, ಸಿಸಿ ಕ್ಯಾಮೆರಾ ಹಾಗೂ ಡಿಜಿಟಲ್ ರಸೀದಿ ಯಂತ್ರಗಳನ್ನೂ ಒದಗಿಸಲಾಗಿದೆ.
ಕಟ್ಟಡವನ್ನು ಸರ್ಕಾರ ನಿರ್ಮಿಸಿದ್ದರೂ, ಒಳಗಿನ ವ್ಯವಸ್ಥೆ ಮತ್ತು ಅಡುಗೆ ಸಾಮಗ್ರಿಗಳನ್ನು ಮಹಿಳೆಯರೇ ತಮ್ಮ ಉಳಿತಾಯದ ಹಣದಿಂದ ಖರೀದಿಸಿದ್ದಾರೆ. ಅಡುಗೆಗೆ ಬೇಕಾದ ಪಾತ್ರೆಗಳು, ಓವನ್, ಫ್ರಿಜ್, ಮಿಕ್ಸಿ-ಗ್ರೈಂಡರ್ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಸ್ವಸಹಾಯ ಸಂಘದ ಸದಸ್ಯರು ಖರೀದಿಸಿ ಈ ಉದ್ಯಮಕ್ಕೆ ಜೀವ ತುಂಬಿದ್ದಾರೆ.
ಕೆಲಸಕ್ಕೆ ಹೋಗುವ ಮೊದಲು ಅಥವಾ ಕಚೇರಿಯಿಂದ ವಾಪಸ್ ಬರುವಾಗ ಜನರಿಗೆ ಇಲ್ಲಿ ಶುಚಿ ಮತ್ತು ರುಚಿಕರವಾದ ಆಹಾರ ದೊರೆಯುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಊಟ ಮತ್ತು ತಿಂಡಿಗಳನ್ನು ನೀಡುವುದು ಈ ಅಕ್ಕ ಕೆಫೆಯ ಪ್ರಮುಖ ಉದ್ದೇಶವಾಗಿದೆ.
ಅಕ್ಕ ಕೆಫೆ ದರಪಟ್ಟಿ:
ಉಪ್ಪಿಟ್ಟು – 1 ಪ್ಲೇಟ್ 30 ರೂ.
ಮುದ್ದೆ ಸಾರು – 30 ರೂ.
ಕೇಸರಿಬಾತ್ – 30 ರೂ.
ಬಾತ್ – 40 ರೂ.
ಚಿತ್ರಾನ್ನ – 40 ರೂ.
ಉಪ್ಪಿಟ್ಟು + ಕೇಸರಿಬಾತ್ – 40 ರೂ.
ಕಾಫಿ / ಟೀ – 10 ರೂ.
ಬಜ್ಜಿ (4ಕ್ಕೆ) – 20 ರೂ.








