ಮೈಸೂರು: ನನ್ನ ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲೇ ಉಳಿದು ಜನರ ಸೇವೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ವರಕೂಡು ಗ್ರಾಮದಲ್ಲಿ ಬೀರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ನಾನು ರಾಜಕೀಯ ಜೀವನದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದೇನೆ. ಸೋತ ಸಂದರ್ಭದಲ್ಲೂ ಜನಸೇವೆಯನ್ನು ಬಿಡಲಿಲ್ಲ ಎಂದು ಹೇಳಿದರು.
ಈಗ ಕೆಲಸದ ಒತ್ತಡದಿಂದ ಕ್ಷೇತ್ರಕ್ಕೆ ಹೆಚ್ಚು ಬರಲು ಸಾಧ್ಯವಾಗುತ್ತಿಲ್ಲ. ನನ್ನ ಮಗ ಯತೀಂದ್ರ ಕ್ಷೇತ್ರಕ್ಕೆ ಬರುತ್ತಾರೆ. ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿದರು.
ದೇವರು ಇದ್ದಾನೆ, ಎಲ್ಲರಲ್ಲೂ ಭಕ್ತಿ ಇರಬೇಕು. ಶುದ್ಧ ಭಕ್ತಿ ಇಲ್ಲದೆ ಎಷ್ಟೇ ದೇವರ ದರ್ಶನ ಮಾಡಿದರೂ ಅದರ ಫಲ ಸಿಗುವುದಿಲ್ಲ. ನಿಷ್ಕಲ್ಮಶ ಭಕ್ತಿ ಇರಬೇಕು ಮತ್ತು ಯಾರನ್ನೂ ದ್ವೇಷಿಸುವ ಮನಸ್ಸು ಇರಬಾರದು ಎಂದು ಅವರು ಹೇಳಿದರು.
ನನಗೂ ಹಾಗೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದಾಗ ಮಾತ್ರ ದೇವರು ಕೃಪೆ ತೋರುತ್ತಾನೆ. ದೇವರು ಒಬ್ಬನೇ ಇದ್ದು, ದೇವಸ್ಥಾನದಲ್ಲಷ್ಟೇ ಅಲ್ಲದೆ ಎಲ್ಲೆಡೆ ಇದ್ದಾನೆ ಎಂದು ಅವರು ಹೇಳಿದರು.ಇದನ್ನು ಓದಿ –ಸಚಿವರಿಗೆ ಡಿನ್ನರ್ ಪಾರ್ಟಿ: ಮಾ. 16ರಂದು ಸಿಎಂ ಆಹ್ವಾನ
ಗ್ರಾಮಕ್ಕೆ ಆಗಮಿಸಿದ ಸಿಎಂಗೆ ಸ್ಥಳೀಯರು ಜೆಸಿಬಿ ಮೂಲಕ ಸೇಬಿನ ಹಾರ ಹಾಕಿ, ಹೂಮಳೆ ಸುರಿಸಿ ಭರ್ಜರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಉಪಸ್ಥಿತರಿದ್ದರು.








