- ವೇಳಾಪಟ್ಟಿ ಮತ್ತು ಪ್ರಮುಖ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಟಿ20 ವಿಶ್ವಕಪ್ ಮುಗಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ಎರಡು ತಿಂಗಳುಗಳ ಕಾಲ ನಡೆಯುವ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್–2026ರ ಪಂದ್ಯಾವಳಿ ಮಾರ್ಚ್ 28ರಿಂದ ಆರಂಭವಾಗಲಿದೆ ಎಂದು ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಭಾನುವಾರ (ಮಾರ್ಚ್ 8) ದೃಢಪಡಿಸಿದೆ. ಆದರೆ ಸಂಪೂರ್ಣ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕೂಡ ಟ್ರೋಫಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಈ ಆವೃತ್ತಿಯ ಪ್ಲೇಆಫ್ ಪಂದ್ಯಗಳು ಮೇ 26ರಿಂದ ಆರಂಭವಾಗಲಿವೆ. ಕ್ವಾಲಿಫೈಯರ್–1 ಹಾಗೂ ಫೈನಲ್ ಪಂದ್ಯಗಳು ಮೇ 31ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ.
ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್–2 ಪಂದ್ಯಗಳು ಅಹಮದಾಬಾದ್ ಮತ್ತು ರಾಯ್‌ಪುರದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಈ ಕುರಿತು ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಪಂದ್ಯಗಳ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮೊದಲ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಿ, ನಂತರ ಉಳಿದ ಪಂದ್ಯಗಳ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ.
ಸಂಪ್ರದಾಯದಂತೆ, ಕಳೆದ ಆವೃತ್ತಿಯ ಫೈನಲ್ ಆಡಿದ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಬಹುದು ಎಂಬ ನಿರೀಕ್ಷೆ ಇದೆ. ಆದರೆ ಇದಕ್ಕೂ ಅಧಿಕೃತ ಘೋಷಣೆ ಬಾಕಿಯಿದೆ.
ಐಪಿಎಲ್ 2026ರಲ್ಲಿ ಒಟ್ಟು 10 ತಂಡಗಳು ‘ಡಬಲ್ ರೌಂಡ್-ರಾಬಿನ್’ ಸ್ವರೂಪದಲ್ಲಿ ಆಡಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಲಿದೆ – ಒಮ್ಮೆ ತಮ್ಮ ತವರಿನಲ್ಲಿ ಮತ್ತು ಮತ್ತೊಮ್ಮೆ ಎದುರಾಳಿಯ ಮೈದಾನದಲ್ಲಿ.
ಪಂದ್ಯಾವಳಿ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ರಾಯ್‌ಪುರ ಸೇರಿದಂತೆ 10 ಪ್ರಮುಖ ನಗರಗಳಲ್ಲಿ ನಡೆಯಲಿದೆ.ಇದನ್ನು ಓದಿ –ಯುದ್ಧದ ಪರಿಣಾಮ: ಅಡುಗೆ ಎಣ್ಣೆ ಬೆಲೆ ಏರಿಕೆ
ಈ ಬಾರಿ ಐಪಿಎಲ್‌ನಲ್ಲಿ ಪಂದ್ಯಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಸಾಮಾನ್ಯವಾಗಿ 74 ಪಂದ್ಯಗಳು ನಡೆಯುತ್ತಿದ್ದರೆ, 2026ರ ಆವೃತ್ತಿಯಲ್ಲಿ 80 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಪಂದ್ಯಗಳು ಸೇರಿ ಒಟ್ಟು 84 ಪಂದ್ಯಗಳು ನಡೆಯಲಿವೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯಗಳು ನಡೆಯುವ ಆವೃತ್ತಿಯಾಗಲಿದೆ.








