ಗದಗ: ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಅವರೊಂದಿಗೆ ಇಬ್ಬರು ಪಿಎಗಳಾದ ಮಂಜುನಾಥ್ ವಾಲ್ಮೀಕಿ ಹಾಗೂ ಗುರುನಾಯ್ಕ್ ಕೂಡ ಬಂಧನಕ್ಕೊಳಗಾಗಿದ್ದಾರೆ.
ರಸ್ತೆ ಬದಿ ತಡೆಗೋಡೆ ನಿರ್ಮಾಣದ 1 ಕೋಟಿ ರೂ. ಕಾಮಗಾರಿಗೆ 11 ಲಕ್ಷ ರೂ. ಕಮಿಷನ್ ಬೇಡಿಕೆಯಿಟ್ಟಿದ್ದಾರೆಯೆಂದು ಕ್ಲಾಸ್-1 ಗುತ್ತಿಗೆದಾರ ವಿಜಯ ಪೂಜಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ಟ್ರ್ಯಾಪ್ ನಡೆಸಿ ಮುಂಗಡ ಹಣ ಸ್ವೀಕರಿಸುವ ವೇಳೆ ಬಂಧಿಸಿದೆ.
ಬಾಲಾಜಿ ಆಸ್ಪತ್ರೆ ಬಳಿ ಲಮಾಣಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಎರಡು ದಿನಗಳ ಹಿಂದೆ ಲಂಚ ಬೇಡಿಕೆಯ ಆಡಿಯೋ ದೊರೆತಿದ್ದು, ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.ಇದನ್ನು ಓದಿ –ಟ್ರ್ಯಾಕ್ಟರ್ ಪಲ್ಟಿ; ಮಗು ಸೇರಿ ನಾಲ್ವರು ದುರ್ಮರಣ
ಈ ಕುರಿತು ಪ್ರತಿಕ್ರಿಯಿಸಿದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದ್ದಾರೆ.







