ಮಂಡ್ಯ, ಏಪ್ರಿಲ್ 14: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ನಾಳೆ (ಏಪ್ರಿಲ್ 15) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಿತ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆ ಆದಿಚುಂಚನಗಿರಿ ಕ್ಷೇತ್ರವು ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿತ ಭೈರವೈಕ್ಯ ಮಂದಿರವು ವೈಶಿಷ್ಟ್ಯಪೂರ್ಣವಾಗಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಭದ್ರತಾ ದೃಷ್ಟಿಯಿಂದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಧಾನಿ ಮೋದಿಗಾಗಿ ವಿಶೇಷ ‘ಮೈಸೂರು ಪೇಟ’ ಸಿದ್ಧಪಡಿಸಲಾಗಿದ್ದು, ಮೈಸೂರಿನ ಕಲಾವಿದ ನಂದನ್ ಸಿಂಗ್ ಅವರು ಐದು ದಿನಗಳ ಪರಿಶ್ರಮದಿಂದ ಇದನ್ನು ರೂಪಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಶೈಲಿಯ ಈ ಪೇಟವು ಬನಾರಸ್ ಬಟ್ಟೆ ಹಾಗೂ ಗಂಡಭೇರುಂಡ ವಿನ್ಯಾಸದಿಂದ ಅಲಂಕರಿಸಲಾಗಿದೆ. ನಿರ್ಮಲಾನಂದನಾಥ ಶ್ರೀಗಳ ಸೂಚನೆಯಂತೆ ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯಿಂದ ಈ ಗೌರವ ಸಲ್ಲಿಸಲಾಗುತ್ತಿದೆ.
ಪ್ರಧಾನಿ ಮೋದಿಯವರ ಕಾರ್ಯಕ್ರಮ ಪಟ್ಟಿ:
- ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
- ಬೆಳಿಗ್ಗೆ 10:50ಕ್ಕೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್ ತಲುಪಲಿದ್ದಾರೆ.
- ಬೆಳಿಗ್ಗೆ 11 ಗಂಟೆಗೆ ಮಠಕ್ಕೆ ತೆರಳಿ ಭೈರವೈಕ್ಯ ಮಂದಿರ ಉದ್ಘಾಟನೆ ನೆರವೇರಿಸಲಿದ್ದಾರೆ.
- ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
- ಕಾರ್ಯಕ್ರಮದ ಬಳಿಕ ಮತ್ತೆ HAL ವಿಮಾನ ನಿಲ್ದಾಣಕ್ಕೆ ಮರಳಿ, ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ.



