- ಬಾಡಿ ಕ್ಯಾಮೆರಾ ಕಡ್ಡಾಯ
ಬೆಂಗಳೂರು: ಪಾಸ್‌ಪೋರ್ಟ್ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸಲು ಬೆಂಗಳೂರು ನಗರ ಪೊಲೀಸರು ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದಾರೆ.
ಡಿಜಿ ಮತ್ತು ಐಜಿಪಿ ಸೂಚನೆಯಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಈ ಆದೇಶ ಪ್ರಕಟಿಸಿದ್ದಾರೆ. ಹೊಸ ನಿಯಮಗಳ ಪ್ರಕಾರ, ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಅಧಿಕಾರಿಗಳು ಕಡ್ಡಾಯವಾಗಿ ಬಾಡಿ-ವೋರ್ನ್ ಕ್ಯಾಮೆರಾ ಧರಿಸಬೇಕು. ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಬದಲಾಗಿ, ಸಂಬಂಧಿತ ಅಧಿಕಾರಿಗಳು ಅರ್ಜಿದಾರರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಭೇಟಿ ವೇಳೆ ನೆರೆಹೊರೆಯವರಿಂದ ಅಗತ್ಯ ಮಾಹಿತಿಯನ್ನೂ ಸಂಗ್ರಹಿಸಬೇಕು.
ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮುನ್ನ ಎಸ್‌ಎಂಎಸ್ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಬೇಕು. ಯಾವುದೇ ರೀತಿಯ ಹಣದ ಆಮಿಷ ಅಥವಾ ನಿರೀಕ್ಷೆ ಇಡಬಾರದು. ಅರ್ಜಿದಾರರಿಗೆ ಕಿರುಕುಳ ನೀಡುವುದು, ವಿನಾಕಾರಣ ಅಲೆದಾಡಿಸುವುದು ಅಥವಾ ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡುವುದು ನಿಷೇಧಿಸಲಾಗಿದೆ.ಇದನ್ನು ಓದಿ –ಬಸ್‌ನಲ್ಲಿ 12.6 ಕೆಜಿ ಗಾಂಜಾ ಪತ್ತೆ
ವರದಿ ಸಲ್ಲಿಸುವಾಗ ಅಧಿಕಾರಿಗಳು ಸ್ಪಷ್ಟ ಹಾಗೂ ಸಮರ್ಪಕ ಪುರಾವೆಗಳೊಂದಿಗೆ ವರದಿ ನೀಡಬೇಕು. ತರ್ಕಸಮ್ಮತ ಕಾರಣಗಳಿಲ್ಲದೆ ನಕಾರಾತ್ಮಕ ವರದಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಯಮಗಳ ಅನುಸರಣೆ ಖಚಿತಪಡಿಸಿಕೊಳ್ಳಲು ಸಂಬಂಧಿತ ಡಿಸಿಪಿಗಳು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.








