- ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು (ಗುರುವಾರ) ಪಟ್ನಾದಲ್ಲಿ ನಡೆಯುವ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದರಿಂದ ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದ್ದರೆ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಬಹುದೆಂಬ ಸೂಚನೆ ಕೂಡ ದೊರೆತಿದೆ.
ಸಂಯುಕ್ತ ಜನತಾದಳ (ಜೆಡಿ-ಯು) ಅಧ್ಯಕ್ಷರಾದ ನಿತೀಶ್ ಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗೆ ಸೇರಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಹಾಜರಿರಲಿದ್ದಾರೆ ಎಂದು ಎನ್‌ಡಿಎ ಮೂಲಗಳು ತಿಳಿಸಿವೆ.
“ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗುರುವಾರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರಲಿದ್ದಾರೆ,” ಎಂದು ಎನ್‌ಡಿಎ ಮೂಲವೊಂದು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ.
ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆಗೆ, “ಸಮಯ ಬಂದಾಗ ಎಲ್ಲವೂ ತಿಳಿಯುತ್ತದೆ” ಎಂದು ಮೂಲಗಳು ಪ್ರತಿಕ್ರಿಯಿಸಿವೆ.
ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು, ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜನತಾ ದಳ (ಯುನೈಟೆಡ್) ಪಕ್ಷದ ಪ್ರಮುಖ ಸಭೆಯೂ ನಡೆಯುತ್ತಿದೆ. ಸಭೆಯಲ್ಲಿ ಪಕ್ಷದ ಹಿರಿಯ ನಾಯಕರುಗಳಾದ ಸಂಜಯ್ ಝಾ ಮತ್ತು ರಾಜೀವ್ ರಂಜನ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಬಿಹಾರದಲ್ಲಿ ಒಟ್ಟು ಐದು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅವುಗಳಲ್ಲಿ ಜೆಡಿಯು ಪಕ್ಷಕ್ಕೆ ಎರಡು ಸ್ಥಾನಗಳಿವೆ. ಬಿಜೆಪಿ ಕೂಡ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕೂಡ ಈ ಸ್ಥಾನಗಳಲ್ಲಿ ಒಂದರಿಂದ ಸಂಸತ್ತಿಗೆ ಪ್ರವೇಶಿಸುವ ಸಾಧ್ಯತೆ ಇದೆ.ಇದನ್ನು ಓದಿ –ಮೈಸೂರಿನಲ್ಲಿ ಮೊದಲ ‘ಅಕ್ಕ ಕೆಫೆ’ ಆರಂಭ
ನಿತೀಶ್ ಕುಮಾರ್ ರಾಜ್ಯಸಭೆಗೆ ತೆರಳಿದರೆ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆಯಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.








