ನಮ್ಮ ನಾಡು ಮಹಾನ್ ವ್ಯಕ್ತಿಗಳು, ಕವಿಗಳು, ಸಾಹಿತಿಗಳು ಜನಿಸಿದಂತಹ ಪುಣ್ಯ ನಾಡು ಅಂತಹ ಮಹಾಪುರುಷರುಗಳಿಂದ ಸಾವಿರಾರು ನೀತಿ ಬೋಧನೆಗಳು ನಡೆದಂತಹ ದಿವ್ಯ ನಾಡು. ನಮ್ಮ ನಾಡಲ್ಲಿ ವಿಧವಿಧವಾದ ಜಾತಿ, ಧರ್ಮ ವ್ಯವಸ್ಥೆಗಳಿಗೆ ಲಕ್ಷ ,ಲಕ್ಷ ಜನರು ಒಟ್ಟು ಸೇರುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಹಾಗೆ ಅನೇಕ ಪುರಾತನ ಇತಿಹಾಸಗಳು ಕೂಡ ನಮ್ಮ ಇಡೀ ಜಗತ್ತಿಗೆ ಹರಡಿ ಪ್ರಾಮುಖ್ಯತೆಯನ್ನು ಗಳಿಸಿದೆ. ಕದಂಬರಿಂದ, ಚಾಲುಕ್ಯರವರೆಗೆ ರಾಷ್ಟ್ರಕೂಟರಿಂದ, ಮೈಸೂರಿನ ಅರಸರ ತನಕ ಸಾಹಿತ್ಯ, ವಾಸ್ತುಶಿಲ್ಪ, ಭವ್ಯತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಂತಹ ಶ್ರೇಷ್ಠತೆ ನಮ್ಮ ನಾಡಿದ್ದು. ಪಂಪ, ರನ್ನರಿಂದ ಕುವೆಂಪು, ಕಾರಂತರ ತನಕ ಸಾಹಿತ್ಯದ ತೇರು ನಮ್ಮ ಮುಂದಿನ ತಲೆಮಾರಿಗೂ ತಲುಪಿರುವುದು ಈ ನಾಡಿನ ಸಂಸ್ಕೃತಿಯ ನಿರಂತರತೆಗೆ ಸಾಕ್ಷಿಯಾಗಿದೆ.
ಹಾಗೆ ನಮ್ಮ ನಾಡಿನಲ್ಲಿ ಹಿರಿಯರು ಏಕೀಕರಣದ ಹಾದಿಯಲ್ಲಿ ಶ್ರಮ ಪಟ್ಟಿರುವುದು ಸ್ಮರಣೀಯ ಸಂಗತಿಯಾಗಿದೆ.ನಮ್ಮನಾಡಿನ ರಕ್ಷಣೆ ನಮ್ಮ ಕರ್ತವ್ಯ ಪ್ರಾಕೃತಿಕ ಸಿರಿವಂತಿಕೆ, ಸಹೃದಯತೆ ಹೊಸತನ ಧಾರ್ಮಿಕತೆ ಸೇರಿದಂತೆ ವಿಶಿಷ್ಟತೆಯ ಆಗರವಾಗಿರುವ ಈ ಪ್ರದೇಶ ಕರುನಾಡಿನ ಹೆಮ್ಮೆಯಾಗಿದೆ.ಎಲ್ಲಾ ಧರ್ಮಗಳಿಗೂ ಸಮನ್ವಯ ಸಾರುವುದು ನಮ್ಮ ಮಂತ್ರ ಧಾರ್ಮಿಕ ಸಹಿಷ್ಣತೆಯನ್ನು ಕಾಪಾಡಿಕೊಂಡು ಬರುತ್ತಿರುವ ದೇಶ ಎಂಬ ಮಹಾ ಹೆಗ್ಗಳಿಕೆಯು ನಮ್ಮ ನಾಡಿಗಿದೆ.
ಆದರೆ ಇವುಗಳ ಹಿಂದೆ ನಡೆಯುವ ಕೋಮುಗಲಭೆ, ಹಿಂಸಾಚಾರಗಳಿಗೆ ವಿದ್ವಾಂಸ ಕೃತ್ಯಗಳಿಗೆ ಇಲ್ಲಿ ಯಾರೂ ಜವಾಬ್ದಾರಿ ಅಲ್ಲವೇ? ಎಂಬುದು ಸಂಶಯಾಸ್ಪದವಾಗಿದೆ. ಈ ಕೃತ್ಯಗಳು ನಮ್ಮ ಬೆನ್ನ ಹಿಂದೆ ನಮ್ಮ ನೆರಳಂತೆ ಭಾದಿಸುತ್ತಿದೆ ಈ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಯಾವಾಗ ಅಂತ್ಯ ಎಂಬುದು ತಿಳಿಯದಾಗಿದೆ.ಸಾರ್ವಜನಿಕವಾಗಿ ನಡೆಯುವ ಪ್ರಚೋದಿಸುವ ಕಾರ್ಯಕ್ರಮಗಳಿಗೆ ಕಡಿವಾಣವೇ ಇಲ್ಲವೆಂಬ ಬೇಸರ ಛಾಯೆ ಮೂಡುತ್ತಿದೆ. ನಮ್ಮಲ್ಲಿರುವ ವಿಶ್ವಾಸ, ಆಚಾರ, ವಿಚಾರಗಳು ಒಂದೆಡೆಯಾದರೆ ಅವುಗಳನ್ನೆಲ್ಲ ರಾಜಕೀಯ ಮಾಡಿ ಜನರ ಮನಸ್ಸನ್ನು ಕೆರಳಿಸುವ ಕೆಲಸ ಇನ್ನೊಂದೆಡೆ ಆಗುತ್ತಿದೆ.
ಆದರೆ ಜಾತಿ, ಧರ್ಮ, ರೀತಿ, ನೀತಿ ಯಾವುದೇ ಇರಲಿ ಅವುಗಳನ್ನು ಅವಲಂಬಿಸುವ ಬಗ್ಗೆ ನಮ್ಮಲ್ಲಿ ಯಾವ ರೀತಿಯ ಆಕ್ಷೇಪವಿಲ್ಲ. ಆದರೆ ಇದನ್ನೆಲ್ಲ ಮೀರಿಸುವ ಭಾಷಣ ಕಾರ್ಯಕ್ರಮಗಳು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ನಡೆಯುವುದರಿಂದ ತುಂಬಾ ಪರಿಣಾಮ ಸಾಮರಸ್ಯದ ಮೇಲೆ ಬೀರುತ್ತಿದೆ. ಸಾರ್ವಜನಿಕವಾಗಿ ಎಲ್ಲಾ ಧರ್ಮದವರು ಸಮಾನರು ಎಲ್ಲರಿಗೂ ಒಂದೇ ಕಾನೂನು ಆದರೆ ಧಾರ್ಮಿಕ ನಂಬಿಕೆ ಆಚರಣೆಗಳು ವಿಭಿನ್ನವಾಗಿದೆ. ನಮ್ಮ ನಾಡಿನ ಕಥೆ ಕೆಲವೊಮ್ಮೆ ಶೋಚನೀಯ ಅನಿಸುತ್ತಿದೆ.
ಯಾಕೆಂದರೆ ಕಣ್ಣಿಗೆ ಕಾಣದ ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸಂಘ-ಸಂಸ್ಥೆಗಳು ಹುಟ್ಟಿವೆ.ಮತ್ತು ಇನ್ನೂ ಹುಟ್ಟತ್ತಾನೆ ಇವೆ.ಇವುಗಳಲ್ಲಿ ಸತ್ಯವಾದದ್ದು ಯಾವುದು ಮಿಥ್ಯವಾದದ್ದು ಯಾವುದು, ಎಂಬುದೇ ನಮಗೆ ಸಂಶಯಸ್ಪದವಾಗಿದೆ. ಕೆಲವು ಸಂಘ-ಸಂಸ್ಥೆಗಳು ಅತ್ಯುತ್ತಮ ವ್ಯವಸ್ಥೆಗಳು ಒಳಗೊಂಡಿದ್ದರೆ ಕೆಲವು ಸಂಘ ಸಂಸ್ಥೆಗಳು ಅವ್ಯವಹಾರ ನಡೆದು ನಮ್ಮ ಸಮಾಜ ಕಲ್ಯಾಣ ಕಾರ್ಯಗಳನ್ನು ಹಾಳು ಮಾಡಲೆಂದೇ ಜಾಗೃತಿಗೊಂಡಿದೆ. ನಮ್ಮ ನಾಡಿನಲ್ಲಿರುವ ಅಸ್ಪೃಶ್ಯತೆ, ಜಾತಿವಾರು ವ್ಯವಸ್ಥೆ, ನ್ಯಾಯ ಸಮಾನತೆ, ಕೋಮು ಸೌಹಾರ್ದತೆ ಮತ್ತು ಶಾಂತಿಗಾಗಿ ಶ್ರಮಿಸಿದರೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಸಂಶಯವೇ ಇಲ್ಲ.
ಹಾಗೆ ಸರಕಾರಿ ಶಾಲೆಗಳ ಬಗ್ಗೆ ಆಕರ್ಷಣೆ, ಸ್ಥಳೀಯ ಆರೋಗ್ಯ ಸೇವಾ ಸೌಲಭ್ಯದ ಒದಗಿಸುವಿಕೆ, ಮಹಿಳಾ ಉದ್ಯೋಗಕ್ಕೆ ಅನುಕೂಲದ ಯೋಜನೆ ಅನುಷ್ಠಾನಗೊಳಿಸಿ, ಜನರ ನಡುವೆ ಸಾಮರಸ್ಯವನ್ನು ಉಳಿಸಿ ಬೆಳೆಸಿಕೊಂಡು,ಯಾರು ಇಲ್ಲಿ ಮೇಲು, ಕೀಳೋ ತಾನು ಮಾಡುವ ಕೆಲಸದಲ್ಲಿ ನಂಬುವ ವಿಚಾರದಲ್ಲಿ ಅಹಂಭಾವವಿಲ್ಲದೆ ತೃಪ್ತ ಮನೋಭಾವ ಹೊಂದಿರಬೇಕು. ನಮ್ಮ ನೋವಿಗೆ ನಾವೇ ಎನ್ನುವಂತೆ ನಾಳಿನ ದಿನದ ಗ್ಯಾರಂಟಿನೇ ಇಲ್ಲದ ಹಿಂದಿನ ಜಗತ್ತಿನಲ್ಲಿ ಬೇರೆಯವರ ವಿಷಯದ ಬಗ್ಗೆ ಕೊಂಕು ನುಡಿಗಳನ್ನು ನುಡಿಯದೆ ಬದುಕುವುದರಿಂದ ಎಲ್ಲರ ಜೊತೆ ಸಮನ್ವಯ ಜೀವನದ ಪರಿಪಾಠ ಬೆಳೆಸಿದ್ದಲ್ಲಿ ನಮ್ಮ ಸುತ್ತಮುತ್ತಲಿನ ವಾತಾವರಣವು ಸುಖಮಯವಾಗಿರುವುದು. ಹಾಗೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿ ಬೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.ಎಂಬುದೇ ನನ್ನ ಅಂಬೋಣ ಇಷ್ಟು ಹೇಳುತ ನನ್ನ ಪುಟ್ಟ ಬರಹಕ್ಕೆ ಪೂರ್ಣ ಚುಕ್ಕಿಯನ್ನಿಡುವೆ.

ಸವಿತಾ ಸತೀಶ್ ಶೆಟ್ಟಿ {ಸವಿಸತಿ}