ಬೆಂಗಳೂರು: ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಐಟಿ ಪಾರ್ಕ್ ಹಾಗೂ ಸೆಮಿಕಂಡಕ್ಟರ್ ಪಾರ್ಕ್ಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ವೇಗ ನೀಡುವ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಅಭಯ್ ಪಾಟೀಲ್ ಅವರು ಬೆಳಗಾವಿಯಲ್ಲಿ ಐಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ನಿರ್ಮಾಣದ ಕುರಿತು ಪ್ರಸ್ತಾಪಿಸಿದ ವೇಳೆ ಸಚಿವರು ಈ ಮಾಹಿತಿ ನೀಡಿದರು.
ಬೆಳಗಾವಿಯನ್ನು ಅಭಿವೃದ್ಧಿಪರ ನಗರವನ್ನಾಗಿ ರೂಪಿಸಲು ಐಟಿ ಪ್ಲಗ್ ಅಂಡ್ ಪ್ಲೇ ಮೂಲಸೌಕರ್ಯ ನಿರ್ಮಾಣ, ಸ್ಟಾರ್ಟ್ಅಪ್ ಹಾಗೂ ನವೀನತೆ ಪರಿಸರವನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ವೇಗವರ್ಧಕ ಜಾಲಗಳು, ಸೀಡ್ ಫಂಡ್ ಬೆಂಬಲ, ಟೆಕ್ಸಿಲರೇಷನ್, ನಿಪುಣ ಕರ್ನಾಟಕ, ಐಡಿಯಾ2ಪಿಓಸಿ ಎಲಿವೇಟ್ (ಗ್ರಾಂಟ್ ಇನ್ ಏಡ್), ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮ, ಮಹಿಳಾ ಉದ್ಯಮಶೀಲತೆ ಉತ್ತೇಜನ ಹಾಗೂ ಗ್ರಾಸ್ ರೂಟ್ ಇನೋವೇಷನ್ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.ಇದನ್ನು ಓದಿ –ರಾಜ್ಯದ ಹಲವು ಭಾಗಗಳಲ್ಲಿ ಮಳೆ: ಸಿಡಿಲಿಗೆ ಇಬ್ಬರು ಬಲಿ
ಈ ಯೋಜನೆಗಳ ಮೂಲಕ ಬೆಳಗಾವಿಯಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.








