ತೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ಸಂಯುಕ್ತ ದಾಳಿಯ ಬೆನ್ನಲ್ಲೇ ಇರಾನ್ ಮಧ್ಯಪ್ರಾಚ್ಯದಲ್ಲಿ ಪ್ರತಿದಾಳಿ ನಡೆಸಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ. ಶನಿವಾರ ಯುಎಇಯ ಅಬುಧಾಬಿ ಮತ್ತು ದುಬೈ, ಕತಾರ್‌ನ ದೋಹಾ ಹಾಗೂ ಸೌದಿ ಅರೇಬಿಯಾದ ರಿಯಾದ್ ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಅಬುಧಾಬಿಯ ವಸತಿ ಪ್ರದೇಶದಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದ ಪರಿಣಾಮ ಏಷ್ಯಾದ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಇದು ಅಪಾಯಕಾರಿ ಉಲ್ಬಣವಾಗಿದ್ದು, ನಾಗರಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಕ್ರಮ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ದುಬೈ ನಿವಾಸಿಗಳು ಸ್ಫೋಟದ ಭಾರೀ ಸದ್ದು ಕೇಳಿಬಂದಿದ್ದು, ಆಕಾಶದಲ್ಲಿ ಕ್ಷಿಪಣಿಗಳು ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯಿಂದ ಕಟ್ಟಡಗಳ ಕಿಟಕಿಗಳು ನಡುಗಿದವು ಎಂಬ ಮಾಹಿತಿ ಲಭ್ಯವಾಗಿದೆ.
ಈ ನಗರಗಳು ಅಮೆರಿಕ ಸೇನಾ ತಾಣಗಳನ್ನು ಹೊಂದಿರುವುದು ಗಮನಾರ್ಹ. ಅಬುಧಾಬಿಯ ಅಲ್ ಧಾಫ್ರಾ ವಾಯುನೆಲೆಯಲ್ಲಿ ಯುಎಇ ಹಾಗೂ ಅಮೆರಿಕ ವಾಯುಪಡೆಗಳು ಸಂಯುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ. ದುಬೈನ ಜೆಬೆಲ್ ಅಲಿ ಬಂದರು ಮಧ್ಯಪ್ರಾಚ್ಯದಲ್ಲಿನ ಅಮೆರಿಕ ನೌಕಾಪಡೆಯ ಪ್ರಮುಖ ಸಂಪರ್ಕ ಕೇಂದ್ರವಾಗಿದೆ.
ದೋಹಾದ ಅಲ್ ಉದೈದ್ ವಾಯುನೆಲೆ ಯುಎಸ್ ಸೆಂಟ್ರಲ್ ಕಮಾಂಡ್‌ನ ಪ್ರಮುಖ ಪ್ರಧಾನ ಕಚೇರಿಯಾಗಿದೆ. ಸೌದಿ ಅರೇಬಿಯಾದಲ್ಲೂ ಸುಮಾರು 2,000ಕ್ಕೂ ಹೆಚ್ಚು ಅಮೆರಿಕ ಸೈನಿಕರು ನೆಲೆಸಿರುವುದಾಗಿ ವರದಿಯಾಗಿದೆ. ರಿಯಾದ್ ಸಮೀಪದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಇತರೆ ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.








