ಮೈಸೂರು: ಕಾಂತರಾಜ ಸಲ್ಲಿಸಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾಗಿರುವ ಕಾರಣ ಸರ್ಕಾರ ವರದಿ ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಒಕ್ಕಲಿಗರು ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಎಚ್ಚರಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್ ಮಾತನಾಡಿ, ೧೯೯೧ ರಲ್ಲಿ ರಾಜ್ಯದ ಜನಸಂಖ್ಯೆ ೪.೪೯ ಕೋಟಿಗೂ ಅಧಿಕವಿದೆ. ಇದರಲ್ಲಿ ಒಕ್ಕಲಿಗರ ಸಂಖ್ಯೆ ೫೫ ಲಕ್ಷಕ್ಕೂ ಹೆಚ್ಚು ಇತ್ತೆಂದು ತಿಳಿಸಲಾಗಿದೆ. ಆದರೆ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಇದ್ದಾರೆ. ಈ ನಡುವೆ ಕಾಂತರಾಜು ಆಯೋಗ ಕೇವಲ ೬೧ ಲಕ್ಷ ಎಂದು ತಿಳಿಸಿದೆ. ಇದು ಒಕ್ಕಲಿಗ ಸಮುದಾಯವನ್ನು ಒಡೆಯುವ ಹಾಗೂ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸಮೀಕ್ಷೆ ವೇಳೆ ಮನೆ ಮನೆಗೆ ಭೇಟಿ ನೀಡದೇ ಗಣತಿ ಮಾಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್‌ಕಾರ್ಡ್‌ಗಳಲ್ಲಿ ಜಾತಿ ನಮೂನೆ ಅಥವಾ ಜಾತಿ ಸೂಚಕ ಇಲ್ಲ. ಕೇವಲ ಶಾಲಾ ವರ್ಗಾವಣೆ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳಲ್ಲಿ ಮಾತ್ರ ಇದೆ. ಹೀಗಿರುವಾಗ ರಾಜ್ಯದಲ್ಲಿರುವ ಎಲ್ಲಾ ಒಕ್ಕಲಿಗ ಒಳಪಂಡಗಳ ಪೈಕಿ ಎಷ್ಟು. ಜನರಿಗೆ ಟಿಸಿ ಇದೆ, ಎಷ್ಟು ಜನ ವರ್ಗಾವಣೆ ಪ್ರಮಾಣ ಪತ್ರ ಹೊಂದಿದ್ದಾರೆ ಎನ್ನುವುದನ್ನು ಯಾವ ಮಾನದಂಡದ ಆಧಾರದ ಮೇಲೆ ಖಾತರಿ ಮಾಡಿಕೊಂಡರು ಎಂಬುದು ತಿಳಿಯದಾಗಿದೆ ಎಂದು ಲೇವಡಿ ಮಾಡಿದರು.
ಈ ವರದಿಯ ಉದ್ದೇಶ ಕೇವಲ ಒಕ್ಕಲಿಗ ಸಮುದಾಯವನ್ನು ಒಡೆಯುವ ಯತ್ನವಾಗಿದೆ. ಪ್ರಾತಿನಿಧ್ಯವನ್ನು ಎಲ್ಲ ಮೂಲಗಳಿಂದ ತೆಗೆದು ಹಾಕುವ ಸಂಚು ನಡೆಸಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳು ಇದನ್ನು ವಿರೋಧಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ ಮಾತನಾಡಿ, ಸರ್ಕಾರ ವರದಿ ಜಾರಿಗೆ ಮುಂದಾಗಬಾರದು. ಯಾವುದೇ ಕಾರಣಕ್ಕೂ ಈ ವರದಿ ಜಾರಿಗೆ ಬಿಡುವುದಿಲ್ಲ. ಸರ್ಕಾರ ಸಮುದಾಯಕ್ಕೆ ವಿರುದ್ಧವಾಗಿರುವ ವರದಿ ಜಾರಿಗೊಳಿಸಿದರೆ ಸಂಘಟನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಸಿದ್ದರಾಮಯ್ಯನವರ ಮೇಲೆ ನಮಗೆ ಗೌರವವಿದೆ. ಆದರೆ, ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುವ ವರದಿಯ ಬಗ್ಗೆ ಕೂಲಂಕುಶವಾಗಿ ಪರಿಗಣಿಸಬೇಕು. ವರದಿಯನ್ನು ವಿರೋಧಿಸಿ ಸಮುದಾಯದ ಪ್ರತಿಯೊಬ್ಬ ಶಾಸಕರು ವಿರೋಧ ವ್ಯಕ್ತಪಡಿಸಬೇಕು. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಸಹ ಸಮುದಾಯದ ಹೆಸರಿನಲ್ಲೇ ಗೆದ್ದಿದ್ದಾರೆ. ಹೀಗಾಗಿ ಸಮುದಾಯದ ವಿಚಾರದಲ್ಲಿ ಸಾಮೂಹಿಕ ವಿರೋಧ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ಇದನ್ನು ಓದಿ –ಏ.೧೮ಕ್ಕೆ ಮೌನ ಪ್ರತಿಭಟನೆಗೆ ಪರಿಸರ ಬಳಗ ನಿರ್ಧಾರ
ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಎನ್.ಪ್ರಕಾಶ್, ಜಿ.ಕುಮಾರ್‌ಗೌಡ, ಸುಶೀಲಾ ನಂಜಪ್ಪ, ಕೆ.ಪಿ.ನಾಗಣ್ಣ, ಒಂಟಿಕೊಪ್ಪಲು ಗುರುರಾಜ್, ಮುಖಂಡರಾದ ಪ್ರಸನ್ನ ಎನ್. ಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಕೆ.ಮಿರ್ಲೆ ಶ್ರೀನಿವಾಸ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.