ಮೈಸೂರು: ಕಾಂಗ್ರೆಸ್‌ನವರು ಯಾವ ಸಾಧನೆ ಮಾಡಿದ್ದಾರೆ ಎಂದು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇದು ಜನಹಿತ ಮರೆತ ಸರ್ಕಾರದ ಕೆಟ್ಟ ಸಂಸ್ಕೃತಿ ಎಂದು ವಿಧಾನ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಜನ ನಿಮ್ಮನ್ನು ಕೊಂಡಾಡುವುದು ಬಿಟ್ಟು, ನೀವೇ ನಿಮ್ಮನ್ನು ಹೊಗಳಿಕೊಳ್ಳುವ ಕೆಲಸವೇಕೆ. ಸಮಾವೇಶಕ್ಕೆ ಸರ್ಕಾರ ಬಳಸುವ ಹಣಕ್ಕೆ ಬೆಲೆಯಿಲ್ಲವೇ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ದಿನ ಬೆಳಿಗ್ಗೆಯಾದರೆ ಮುಖ್ಯಮಂತ್ರಿ ಕುರ್ಚಿಗೆ ಕಿತ್ತಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರನ್ನು ಬೆದರಿಸಲು, ತಾನೇ ಶಕ್ತಿವಂತ ಎಂದು ತೋರಲು ಸಮಾವೇಶ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಜನರ ಬೆವರಿನ ತೆರಿಗೆ ಹಣವನ್ನು ಗ್ಯಾರಂಟಿ ಹೆಸರಲ್ಲಿ ಅನರ್ಹರಿಗೆ ನೀಡಿ ರಾಜ್ಯವನ್ನು ದಿವಾಳಿ ಮಾಡಲಾಗುತ್ತಿದೆ. ೫ ಕೆ.ಜಿ. ಅಕ್ಕಿ ನೀಡಿದ್ದೇವೆ ಎನ್ನುವುದು ಬಿಟ್ಟರೇ ಹೇಳಲು ಬೇರೇನಿದೆ. ಸಾರಾಯಿ ದರ ಏರಿಸುವ ಮೂಲಕ ಯುವಕರನ್ನು ಗಾಂಜಾ ದಾಸರನ್ನಾಗಿ ಮಾಡುತ್ತಿದ್ದು, ಅವರ ಶಕ್ತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಜಾಬ್ ಅನ್ನು ಈಗ ಯಾರು ಕೇಳಿದ್ದರು. ಮುಖ್ಯಮಂತ್ರಿಯೇ ಕೇಸರಿ ಶಾಲಿಗೆ ಅವಕಾಶ ಇಲ್ಲ ಎನ್ನುವ ಮೂಲಕ ಸಮಸ್ಯೆಯನ್ನು ಜೀವಂತಗೊಳಿಸಿದ್ದಾರೆ. ವಿದ್ಯಾರ್ಥಿಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ. ಎಷ್ಟು ದಿವಸ ಇದೇ ವಿಷಯದಲ್ಲಿ ಗಲಾಟೆ ಮಾಡುತ್ತೀರಾ. ೧೬,೦೦೦ ಶಾಲೆಗಳನ್ನು ಮುಚ್ಚಲಾಗುತ್ತಿದ್ದು, ತಜ್ಞರ ಸಮಿತಿಯನ್ನು ರಚಿಸಿ ಶಿಕ್ಷಣ ವ್ಯವಸ್ಥೆ ಉಳಿಸಬೇಕಿದೆ. ಅಕ್ಷರ, ಆರೋಗ್ಯ ಹಾಳಾದರೆ ರಾಜ್ಯ ಹಾಳಾಗುತ್ತದೆ ಎಂದರು.
ಗಾಂಜಾ ಕೇಂದ್ರ: ಮೈಸೂರು ಜಿಲ್ಲೆಯು ಗಾಂಜಾ, ಅಫೀಮು ಮುಂತಾದ ಮಾದಕದ್ರವ್ಯ ಜಾಲದ ಕೇಂದ್ರವಾಗಿದೆ, ?೧,೦೦೦ ಕೋಟಿ ವ್ಯವಹಾರ ನಡೆದಿದೆ. ಲಂಚ ಕೊಟ್ಟು ಸ್ಥಳ ನಿಯೋಜನೆ ಮಾಡಿಕೊಳ್ಳುವ ಪೊಲೀಸ್ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಯ ತವರು ಜಿಲ್ಲೆ ಎನ್ನುವುದಕ್ಕೆ ಅರ್ಥವಿದೆಯೇ ಎಂದರು.
ಈವರೆಗೆ ಮುಖ್ಯಮಂತ್ರಿ ಓಡಾಟಕ್ಕೆ ೫೮ ಕೋಟಿ ಖರ್ಚಾಗಿದೆ. ಪದೇ ಪದೇ ಮೈಸೂರಿನ ಪ್ರವಾಸ ಅಗತ್ಯವೇ. ಅಹಿಂದ ನಾಯಕ ಎನ್ನುವ ಇವರು, ಅಹಿಂದ ಅಭಿವೃದ್ಧಿಗೆ ಏನು ಮಾಡಿದ್ದಾರೆ ? ಕುರುಬರು ತಮ್ಮ ಕೆಲಸದ ಸ್ಥಳಗಳಲ್ಲಿ ಅಪಾಯ ಎದುರಿಸುತ್ತಿದ್ದು, ಅವರಿಗೇ ಕನಿಷ್ಠ ರಕ್ಷಣೆ ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದು ದೂರಿದರು.ಇದನ್ನು ಓದಿ –BJP-JDS ಮೈತ್ರಿಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ: ಎಚ್. ಡಿ ದೇವೇಗೌಡ
ಯಡಿಯೂರಪ್ಪ, ಸಿದ್ದರಾಮಯ್ಯ ಜತೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವಿರೋಧ ಪಕ್ಷ ಎನ್ನುವುದೇ ಇಲ್ಲ. ಇದ್ದಿದ್ದರೇ ಇದನ್ನೆಲ್ಲಾ ಪ್ರಶ್ನಿಸಬೇಕಿತ್ತಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.








