ಅಭಿಮಾನ ಎಂಬುದು ವ್ಯಕ್ತಿಯೊಬ್ಬನಲ್ಲಿರ ಬಹುದಾದ ತುಂಬಾ ಭಾವನಾತ್ಮಕವಾದ ಸಂವೇದನೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಒಬ್ಬ ವ್ಯಕ್ತಿಯ ಮೇಲೆ ನಮ್ಮೊಳಗೇ ಉದಿಸಬಹುದಾದ ಪ್ರಾಮಾಣಿಕ ಭಾವನೆ. ಅಭಿಮಾನವೆಂಬುದು ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ ಮೆಚ್ಚುಗೆ , ಮಾರ್ಗದರ್ಶನ , ಸ್ಪೂರ್ತಿ ಹೀಗೆ ಯಾವ ರೂಪಗಳ ಮೂಲಕವಾದರೂ ಸೃಜಿಸಿ ಬೆಳೆಯಬಹುದು.
ಈ ಅಭಿಮಾನವೆಂಬುದು ನಮಗೆ ಮೆಚ್ಚುಗೆಯಾಗುವ ಯಾವುದೇ ಕ್ಷೇತ್ರದ ವ್ಯಕ್ತಿಯ ಮೇಲೆ ನಮಗರಿವಿಲ್ಲದಂತೆಯೇ ಅನಿರ್ಬಂಧಿತವಾಗಿ ಉಂಟಾಗಿ ಸ್ಥಿರವಾಗಿ ಮನದಲ್ಲಿ ನೆಲೆಸಬಲ್ಲದು. ಮುಖ್ಯವಾಗಿ ಅಭಿಮಾನಿಸಲ್ಪಡುವವರಲ್ಲಿ ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕಾರಣಿಗಳು, ಸಾಹಿತಿಗಳು, ವಿಜ್ಞಾನಿಗಳು ಇವರಲ್ಲದೆಯೂ ಜನರ ಮೇಲೆ ಪ್ತಭಾವ ಬೀರಬಲ್ಲ ಯಾವುದೇ ವರ್ಗದ ವ್ಯಕ್ತಿಗಳಾಗಿರಬಹುದು.
ಈಗ ಅದರ ವಿಸ್ತೃತ ವ್ಯಾಖ್ಯಾನಕ್ಕಿಂತ , ಇಂತಹಾ ಅಭಿಮಾನವೆಂಬುದು ಕುರುಡಾದಾಗ ಅಥವಾ ವಿವೇಚನಾ ಶಕ್ತಿಯನ್ನೇ ಕುಂದಿಸಿದಾಗ ಏನೆಲ್ಲಾ ಆಗಬಹುದೆಂಬುದಕ್ಕೆ ಕೆಲವು ನಮ್ಮ ಮುಂದಿನ ಕೆಲವು ಜೀವಂತ ಉದಾಹರಣೆಗಳನ್ನೇ ನೋಡುವುದಾದರೆ….
ಚಿತ್ರನಟ ದರ್ಶನ್ ರೇಣುಕಾ ಸ್ವಾಮಿಯೆಂಬಾತನ ಕೊಲೆ ಆಪಾದಿತರಾಗಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತಮ್ಮ ನಟ ಕೊಲೆ ಆಪಾದಿತನಷ್ಟೇ ಅಲ್ಲ, ಹಿಂದೊಮ್ಮೆ ಮೀಡಿಯಾದವರನ್ನು ಕೀಳುಪದಗಳಲ್ಲಿ ನಿಂದಿಸಿದ ವಿಡಿಯೋ ವೈರಲ್ ಆದರೂ ಅವರನ್ನು ಮನಸಾರೆ ಅಭಿಮಾನಿಸುವವರು ದರ್ಶನ್ ಮಾಡಿದ್ದು ತಪ್ಪು ಎಂದಾಗಲೀ ಅಥವಾ ಅವರನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಾಗಲೀ ಮಾಡೋಲ್ಲ. ದರ್ಶನ್ ಏನೇ ಮಾಡಿದರೂ ಸರಿ ಎಂಬ ಉತ್ಕಟಾಭಿಮಾನ!
ಪ್ರಧಾನಿ ನರೇಂದ್ರಮೋದಿಯ ಅಭಿಮಾನಿಗಳು, ಮೋದಿಯವರ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ವೈಯಕ್ತಿಕ ನಡೆ ಅದು ಹೇಗೇ ಇರಲಿ , ಸರಿಯಿಲ್ಲದೇ ಇರಲೀ ಅದನ್ನು ಎಂದಿಗೂ ತಪ್ಪು ಎನ್ನಲು ಸಾಧ್ಯವೇ ಇಲ್ಲ. ಎಣ್ಣೆ, ಪೆಟ್ರೋಲ್, ಡೀಸೆಲ್ ,ಗ್ಯಾಸು ಹೀಗೆ ಏನೇ ಬೆಲೆ ಏರಿಕೆಯಾಗಲೀ , ಚುನಾವಣಾ ಬಾಂಡುಗಳ ಪ್ರಕರಣವಾಗಲೀ,ಅಥವಾ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಕೇಂದ್ರದ ಯಾವುದೇ ನಿರ್ಣಯಗಳಾಗಲೀ, ಅಥವಾ ಇನ್ನಾವುದೇ ಅಂಶವಾಗಲೀ ಮೋದಿ ಮೇಲಿನ ಅಭಿಮಾನವನ್ನು ಕಡಿಮೆ ಮಾಡೋಲ್ಲ.
ತೀರ ಇತ್ತೀಚಿನ ಘಟನೆ ನೋಡುವುದಾದರೆ, ಪಾಕಿಸ್ತಾನದ ವಿರುದ್ಧ ಪೂರ್ಣಪ್ರಮಾಣದ ಯುದ್ಧ ಬೇಕು ಎಂದೇ ಇಡೀ ದೇಶ, ಮುಖ್ಯವಾಗಿ ಮೋದಿ ಭಕ್ತರು ಹಾತೊರೆಯುತ್ತಿದ್ದರು. ಇವರ ಯುದ್ದೋನ್ಮಾದ ಎಷ್ಟಿತ್ತೆಂದರೆ, ಕರ್ನಾಟಕದ ಸಿ.ಎಂ. ಸಿದ್ದರಾಮಯ್ಯ ಯುದ್ಧ ಸಧ್ಯಕ್ಕೆ ಬೇಕಾಗಿಲ್ಲ ಎಂದಿದ್ದನ್ನೇ ಹಿಡಿದು ಅವರನ್ನು ಪಾಕಿಸ್ತಾನದ ಪರ ಎನ್ನುವಂತೆ ಝಾಡಿಸಿದ್ದರು. ಆದರೆ ಅದೇ ಮೋದಿಯವರು ಆಪರೇಷನ್ ಸಿಂಧೂರ್ ಧಾಳಿಯ ನಾಲ್ಕುದಿನಗಳ ತರುವಾಯ ಕದನವಿರಾಮಕ್ಕೆ ಒಪ್ಪಿ ಯುದ್ಧ ನಿಲ್ಲಿಸಿದಾಗ ಯುದ್ದೋನ್ಮಾದದ ಅಭಿಮಾನಿಗಳು ಸದ್ದಿಲ್ಲದೇ ಸುಮ್ಮನಾದರು. ಅಂದರೆ ಬಹುತೇಕ ಮೋದಿಭಕ್ತರಿಗೆ ಕದನವಿರಾಮ ಇಷ್ಟವಿಲ್ಲದಿದ್ದರೂ ಅದು ಮೋದಿಯವರ ನಿರ್ಣಯ ಎಂದು ದೂಸ್ರಾ ಮಾತನಾಡದೇ ಸೈಲೆಂಟ್ ಆದರು.!
ಮೋದಿಯವರ ನಿರ್ಣಯ ಏನೇ ಆದರೂ ಅದಕ್ಕೆ ಇವರು ಬದ್ಧ ಎಂಬ ಅಭಿಮಾನ.
ಬೆಳಗಾವಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ಒಬ್ಬ ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದು ತುಂಬಾ ಸುದ್ದಿಯಾಯ್ತು. ಅವರ ಅಭಿಮಾನಿಗಳು ಆ ಪೊಲೀಸ್ ಅಧಿಕಾರಿ ಕರ್ತವ್ಯ ಪಾಲನೆಯಲ್ಲಿ ವಿಫಲನಾಗಿದ್ದಕ್ಕೇ ಸಿದ್ದಣ್ಣ ಹಾಗೆ ಮಾಡಿದ್ದು ಎಂದು ಸಮರ್ಥಿಸಿಕೊಂಡರೇ ವಿನಃ ಸಾರ್ವಜನಿಕವಾಗಿ ಸಿ.ಎಂ ಹಾಗೆ ಮಾಡಿದ್ದು ತಪ್ಪು ಎನ್ನಲು ಅವರಿಗೆ ಮನಸೇ ಬರಲಿಲ್ಲ.
ಇದು ಸಿದ್ದರಾಮಯ್ಯನವರ ಮೇಲೆ ಅವರ ಅಭಿಮಾನಿಗಳಿಗಿರುವ ಅತೀವ ಅಭಿಮಾನ.
ಕಮಲ್ ಹಾಸನ್ ” ತಮಿಳಿನಿಂದ ಕನ್ನಡ ಹುಟ್ಟಿದ್ದು ” ಎಂದಿದ್ದನ್ನು ಉಗ್ರವಾಗಿ ವಿರೋಧಿಸಿ ಕನ್ನಡ ಯಾವ ಭಾಷೆಯಿಂದಲೂ ಹುಟ್ಟಿಲ್ಲ, ಅದು ಸ್ವತಂತ್ರ ಭಾಷೆ ಎಂದು ಆತನನ್ನು ಉಗ್ರವಾಗಿ ಖಂಡಿಸುವ ನಾವು ಅದೇ ಡಾ. ಎಸ್.ಎಲ್.ಭೈರಪ್ಪ” ಸಂಸ್ಕೃತವೇ ಕನ್ನಡದ ತಾಯಿ, ಕನ್ನಡದ ಮುಕ್ಕಾಲು ಶಬ್ಧಗಳು ಸಂಸ್ಕೃತದಿಂದಲೇ ಬಂದಿವೆ” ಎಂದಾಗ ಮರು ಮಾತನಾಡದೇ ಸುಮ್ಮನಾಗುತ್ತೇವೆ.
ಇದು ಭೈರಪ್ಪನವರ ಮೇಲಿರುವ ಅಭಿಮಾನದ ಪರಿ.
ಎರಡು ವರ್ಷಗಳ ಹಿಂದೆ ” ಜಾತಿ ಗಣತಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಿಂದೂ ಸುಧಾರಣಾವಾದಿಗಳೆಲ್ಲರೂ ಇದನ್ನು ವಿರೋಧಿಸುತ್ತಾರೆ” ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದಾಗ ಅವರ ಅಭಿಮಾನಿಗಳು ಹಿಂದೂವಾದಿಗಳೆಲ್ಲಾ ಅದಕ್ಕೆ ಸಹಮತ ತೋರಿ ಜೈ ಎಂದಿದ್ದರು .ಆದರೆ ತೀರ ಇತ್ತೀಚೆಗೆ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಘೋಷಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಹೊಗಳಿದ ಅದೇ ತೇಜಸ್ವಿ ಸೂರ್ಯನನ್ನು ಇಷ್ಟಪಡುವ ಅವರ ಅಭಿಮಾನಿಗಳು ಸರಿ ಎಂದಿದ್ದಾರೆ !!
ಹಿಂದೊಮ್ಮೆ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದಾಗ ಕಾಂಗ್ರೆಸ್ ಅಭಿಮಾನಿಗಳು, ಬೆಂಬಲಿಗರು ಅವರ ವಿರುದ್ಧ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದರು. ಆದರೆ ಇತ್ತೀಚೆಗೆ ಡಿಕೆಶಿ ಅದೇ ಮಾತನ್ನು ಹೇಳಿದಾಗ ಅದೇ ಕಾಂಗ್ರೆಸ್ ನ ಅಭಿಮಾನಿಗಳು ಮೌನಕ್ಕೆ ಜಾರಿದ್ದರು !
ಇದು ಅವರವರ ನಾಯಕರ ಮೇಲಿನ ಅಭಿಮಾನ !
ಕಳೆದ ತಿಂಗಳು ರಾಜ್ಯ ಸರ್ಕಾರ ಹಾಲಿನ ಬೆಲೆ ಮೂರ್ನಾಲ್ಕು ರೂಪಾಯಿ ಏರಿಸಿದ್ದರ ವಿರುದ್ಧ ಪಬ್ಲಿಕ್ ಟೀವಿ ರಂಗಣ್ಣ ಬಾಯಿಗೆ ಬಂದಂತೆ ರಾಜ್ಯ ಸರ್ಕಾರವನ್ನು ಉಗಿದು ಉಪ್ಪು ಹಾಕಿದ್ದು ನೆನಪಿದೆಯಾ ! . ಆದರೆ ಅದರ ಮಾರನೇ ದಿನವೇ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆಯನ್ನು ಧಿಡೀರ್ ಎಂದು ೫೦ ರೂಪಾಯಿ ಏರಿಸಿದ್ದಕ್ಕೆ ನಮ್ ರಂಗಣ್ಣ ಜಾಣ ಮೌನವಹಿಸಿದ್ದ !!
ಇದೊಂಥರಾ ಕೆಲ ಮಾಧ್ಯಮದವರ ಅಭಿಮಾನದ ರೀತಿ !
ಹೀಗೆ ತಾವು ಅಭಿಮಾನಿಸಲ್ಪಡುವ ವ್ಯಕ್ತಿ ಒಂದೊಮ್ಮೆ ಮಾತನಾಡಿದ್ದು ತಪ್ಪು ಅಥವಾ ಅವರ ವರ್ತನೆ ಸರಿಯಿಲ್ಲ ಎಂದು ಅವರ ಅಭಿಮಾನಿಗಳಿಗೆ ಅನಿಸಿದರೂ ಅದನ್ನು ನೇರವಾಗಿ ಹೇಳಿ ಪ್ರತಿಭಟಿಸಿದ ದಾಖಲೆ ಇಲ್ಲವೇ ಇಲ್ಲ. ಇದನ್ನು ಅಂಧಾಭಿಮಾನ ಎನ್ನುವಿರೋ ಅಥವಾ ವಸ್ತುನಿಷ್ಠತೆಗಿಂತ ವ್ಯಕ್ತಿನಿಷ್ಠತೆ ಮುಖ್ಯವೆಂದು ಕರೆಯುತ್ತೀರೋ ನಿಮಗೆ ಬಿಟ್ಟಿದ್ದು!
ಬಹುಶಃ ಕಮಲ ಹಾಸನ್ ನ ಮೇಲಿರಬಹುದಾದ ಇದೇ ರೀತಿಯ ಅತೀವ ಅಭಿಮಾನದಿಂದಾಗಿಯೇ ಏನೋ, ಆತ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದರೂ ಶಿವರಾಜ್ ಕುಮಾರ್ ಅದನ್ನು ಅಲ್ಲಿಯೇ ಖಂಡಿಸದೇ ಸುಮ್ಮನಾಗಿದ್ದು ಅಥವಾ ಆನಂತರವಾದರೂ ನೇರವಾಗಿ ಆತನ ಹೇಳಿಕೆಯನ್ನು ತಪ್ಪು ಎನ್ನದೇ ಹೋಗಿದ್ದು.!
ತಾವು ಆರಾಧಿಸುವ ಅಭಿಮಾನಿಸುವ ನಾಯಕ/ಕಿ ಏನೇ ತಪ್ಪು ಮಾಡಿದರೂ ಅವರ ಅಭಿಮಾನಿಗಳಲ್ಲಿ, ಅವರನ್ನು ಪ್ರೀತಿಸುವವರಲ್ಲಿ ” ಅಯ್ಯೋ..ಹೀಗೇಕೆ ಮಾಡಿದರು” ಎಂಬ ನೋವಿರುತ್ತದೆಯೇ ಹೊರತು ಅದನ್ನು ನೇರವಾಗಿ ಖಂಡಿಸಲು ಅವರ ಮೇಲಿನ ಅಭಿಮಾನ, ಪ್ರೀತಿ ಗೌರವಗಳು ಹಿಂದೇಟು ಹಾಕುತ್ತವೆ. ಇದನ್ನು ಅಂಧಾಭಿಮಾನ ಎನ್ನುವುದೋ ಅಥವಾ ತಾನು ಅಭಿಮಾನಿಸುವ ವ್ಯಕ್ತಿ ಎಂದಿಗೂ ತಪ್ಪೇ ಮಾಡಲಾರ ಎಂಬ ಅದಮ್ಯ ವಿಶ್ವಾಸವೋ ತಿಳಿಯದು. ವಸ್ತುನಿಷ್ಠವಾಗಿ ವಿಶ್ಲೇಶಿಸುವ, ತರ್ಕಬದ್ದವಾಗಿ ಚರ್ಚಿಸುವ ಅಂಶ ಇಂತಹಾ ಸಂಧರ್ಭಗಳಲ್ಲಿ ಮಾಯವಾಗಿ ಕೇವಲ ವ್ಯಕ್ತಿಮೇಲಿನ ಅಭಿಮಾನವೊಂದೇ ಮೇಲುಗೈ ಸಾಧಿಸುತ್ತದೆ.
ಅಭಿಮಾನ ಕುರುಡಾದಾಗ ವಾಸ್ತವತೆ ನರಳುವುದು ಬಹುಶಃ ಈ ಕಾರಣಕ್ಕಾಗಿಯೇ ಇರಬೇಕು.
ಮರೆಯುವ ಮುನ್ನ
ಅಭಿಮಾನವೆಂಬುದು ಯಾರ ಮೇಲೆಯೇ ಇರಲಿ, ಅದು ನಮ್ಮ ನಾಡು ನುಡಿ ಸಂಸ್ಕೃತಿಗಳಿಗೆ ಪೂರಕವಾಗಿರಬೇಕು. ಯಾವುದೇ ಸೆಲೆಬ್ರಿಟಿ ಅಥವಾ ನಾಯಕನ ಮೇಲಿನ ಅಭಿಮಾನ ಅಥವಾ ಗೌರವಗಳಿಂದಾಗಿ ನಮ್ಮ ಭಾಷೆ ಸಂಸ್ಕೃತಿ, ನೆಲ, ಜಲ ಅಥವಾ ಮೌಲ್ಯಗಳಿಗೆ ಧಕ್ಕೆಯಾಗುವ ಸಂಧರ್ಭಗಳಿದ್ದಲ್ಲಿ ಅಂತಹಾ ಅಭಿಮಾನ ಎಂದಿಗೂ ಸಲ್ಲದು. ಏಕೆಂದರೆ ನಾವು ವಾಸಿಸುವ ತಾಯಿನಾಡು, ಆಡುವ ತಾಯಿನುಡಿ, ಕುಡಿಯುವ ನೀರಿನ ಋಣಕ್ಕಿಂತ ಯಾವುದೂ ದೊಡ್ಡದಲ್ಲ ಹಾಗೂ ಅವುಗಳಿಗೆ ಅಪಮಾನವಾಗುವಂತಹ ಸಂಧರ್ಭ ಬಂದರೆ ತಮ್ಮ ಅಭಿಮಾನದ ವ್ಯಕ್ತಿಯ ವಿರೋಧಕ್ಕೂ ಸಿದ್ಧರಿರಬೇಕಾಗುತ್ತದೆ.
ನೆನಪಿರಲಿ, ಒಬ್ಬ ವ್ಯಕ್ತಿಗಿಂತ ಒಂದು ಜನಪದದ ಮೌಲ್ಯಗಳು, ಪರಂಪರೆ, ಸಂಸ್ಕೃತಿ, ಭಾಷೆ ತುಂಬಾ ದೊಡ್ಡವು .
ಅಭಿಮಾನ ಹಾಲಂತೆ , ದುರಭಿಮಾನ ವಿಷದಂತೆ ಆದರೆ ಅಂಧಾಭಿಮಾನ ಅವಿವೇಕದಂತೆ..!!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.