ನಮ್ಮ ಭಾರತೀಯ ಪರಂಪರೆಯ ಒಂದು ಪ್ರಾಕೃತಿಕ ಋಷಿಮುನಿಗಳ ಸಾಧನೆಯ ಮೂಲವೇ ಯೋಗ, ಆಧ್ಯಾತ್ಮಿಕ ಸಾಧನೆಗೆ ಯೋಗ ಒಂದು ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ ದೈಹಿಕ, ಮಾನಸಿಕತೆಯ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಯೋಗವೇ ಮೂಲ.
ಸಾವಿರಾರು ವರ್ಷಗಳಿಂದಲೂ ಭಾರತದ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಯೋಗವು ಒಂದು.
ಮಹಾ ಯೋಗಿಗಳು, ಧ್ಯಾನಿಗಳಾದ ಪತಂಜಲಿ ಮಹರ್ಷಿಗಳು ತಮ್ಮ “ಯೋಗ ಸೂತ್ರಗಳು” ಎಂಬ ಗ್ರಂಥದ ಮೂಲಕ, ಕ್ಲಿಷ್ಟಕರವಾದ ಯೋಗದ ರಹಸ್ಯಗಳನ್ನು ಸುಲಭವಾಗಿ ತಿಳಿಸಿದ್ದಧರೆ.
‘ಯೋಗ’ ಎಂಬ ಪದವು ಸಂಸ್ಕೃತ ಭಾಷೆಯ ‘ಯುಜ್’ ಎಂಬ ಪದದಿಂದ ಆಗಿದೆ. ಯೋಗವೆಂದರೆ “ಸಾಧನ’, “ಸಮಾಧಿ” ಎಂಬ ಅರ್ಥವೂ ಬರುತ್ತದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ದಿ, ಆತ್ಮವನ್ನೂ ಕೂಡಿಸುವುದರ ಜೊತೆಗೆ ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮದೊಂದಿಗೆ ಪರಮಾತ್ಮನನ್ನು ಸೇರಿಸುವುದಾಗಿದೆ. “ಯೋಗೋ ಉಪಾಯ ಉದ್ದಿಷ್ಟ” ಅಂದರೆ ಮೋಕ್ಷಕ್ಕೆ ಉತ್ತಮವಾದುದು ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ” ಯೋಗಶ್ಚಿತ್ತ ವೃತ್ತಿ ನಿರೋಧ” ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಮುಖ್ಯ ಉದ್ದೇಶ.
ನಮ್ಮ ಭಾರತ ದೇಶದಲ್ಲಿ ಪಾರಂಪರಿಕ ಯೋಗಶಾಸ್ತ್ರವನ್ನು ಮುಂದುವರಿಸಿ ಅನೇಕ ಆಶ್ರಮ ಮತ್ತು ಸಂಸ್ಥೆಗಳು ಯೋಗ ತರಭೇತಿ ನೀಡುವ ಮೂಲಕ ಜೀವನೋತ್ಸಾಹ ಹೆಚ್ಚಿಸಿದ್ದಾರೆ. ಸಾಧನೆಗೆ ಪ್ರಮುಖವಾದುದು ಯೋಗವೆಂಬುದನ್ನು ಜನರಿಗೆ ತಿಳಿಸಿದ್ದಾರೆ.
ಅಷ್ಟಾಂಗ ಯೋಗ(ಎಂಟು ಅಂಗಗಳ ಯೋಗ)
- ಹಠಯೋಗ
- ಯಮ
- ನಿಯಮ
- ಪ್ರಾಣಾಯಾಮ
- ಪ್ರತ್ಯಾಹಾರ
- ಧಾರಣ
- ಧ್ಯಾನ ಮತ್ತು ಸಮಾಧಿ ಸ್ಥಿತಿ ಎಂಬ ಎಂಟು ಅಂಗ ಸಾಧನ ಶಾಸ್ತ್ರವನ್ನು ಹೊಂದಿದೆ.
ಯಾರೊಬ್ಬರಾದರೂ ತಮ್ಮ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದರೆ, ಮುಂಜಾನೆ ಅಥವಾ ಸಂಧ್ಯಾಕಾಲದಲ್ಲಿ ಸೂರ್ಯನಮಸ್ಕಾರ ಮಾಡಿದರೂ ಸಹ ನಮ್ಮ ದೇಹ ಮತ್ತು ಮನಸ್ಸು ಅತ್ಯಂತ ಪ್ರಫುಲ್ಲ ಮತ್ತು ಆಧ್ಯಾತ್ಮಿಕವಾಗಿರುತ್ತದೆ. ಇಂದಿನ ದಿನಗಳಲ್ಲಿ ಒತ್ತಡಭರಿತ ಜೀವನ ಶೈಲಿಯಿಂದಾಗಿ ನಾವು ನಮ್ಮ
ಮನಸ್ಸಿನ ಶಾಂತಿ ಮತ್ತು ಏಕಾಗ್ರತೆ ಕೊರತೆಯನ್ನು ಕಾಣುತ್ತೇವೆ. ಈ ಕೊರತೆಯನ್ನು ನೀಗಿಸಲು ನಾವು
ಪ್ರತಿನಿತ್ಯ ಮುಂಜಾನೆ ಯೋಗಭ್ಯಾಸ ಮಾಡುವುದು ಮುಖ್ಯವಾಗಿದೆ.
ನಾವು ವಾಸಿಸುತ್ತಿರುವ ಜಗತ್ತಿನಲ್ಲಿ ಸ್ಥಿಮಿತವಾದ ಮತ್ತು ದೈಹಿಕ ಸಮತೋಲನ ಕಾಯ್ದುಕೊಳ್ಳುವುದು ಒಂದು ಸವಾಲೆ ಸರಿ. ಇಂತಹ ಸಮಯದಲ್ಲಿ ಅನೇಕ ಸವಾಲಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗುವುದು, ಇಂತಹ ಸಂದರ್ಭದಲ್ಲಿ ಪ್ರಾಣಾಯಮವಾದಂತಹ ಅನುಲೋಮ-ವಿಲೋಮ, ಭ್ರಾಮರಿ, ಓಂ’ಕಾರ ಉಚ್ಚಾರಣೆಯಿಂದ ಮಾತ್ರ ಸಾಧ್ಯ, ಜೀವನದಲ್ಲಿ ಎಂತಹ ಸಂದರ್ಭವೇ ಬರಲಿ ಅದನ್ನು ಎದುರಿಸುವಂತಹ ಚೈತನ್ಯ ನೀಡುವುದೇ ಯೋಗ. ಅತ್ಯಂತ ಸರಳ ಮತ್ತು ಪರಿಣಾಮಕಾರಿ ಆಸನಗಳಾದ.
ಪದ್ಮಾಸನ:-
ಕಮಲದ ಭಂಗಿ ಅಥವಾ ಪದ್ಮಾಸನದಲ್ಲಿ ಕುಳಿತು ಚಿನ್ಮುದ್ರೆಯನ್ನು ಹಿಡಿದು ನೇರವಾಗಿ ಕುಳಿತಾಗ, ಕಣ್ಮುಚ್ಚಿ
ಆಳವಾದ ಉಸಿರಾಟ ಮತ್ತು ಬೆನ್ನುಮೂಳೆಯನ್ನು ನೇರಗೊಳಿಸುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. “ಭ್ರಮರಿ” ಪ್ರಾಣಾಯಮ ಮತ್ತು ವೃಕ್ಷಾಸನದಂತಹ ಇತರ ಯೋಗಭಂಗಿಗಳೊಂದಿಗೆ ಅಭ್ಯಾಸ ಮಾಡುವುದರಿಂದ ಉತ್ತಮ ಸ್ಮರಣಶಕ್ತಿ ಮತ್ತು ಏಕಾಗ್ರತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ನಮ್ಮ ಮನಸ್ಸು ಕಮಲದ ಹೂವಿನಷ್ಟೆ ತಾಜಾವಾಗಿರುತ್ತದೆ.
ಹಲಾಸನ:-
ಹಲಾಸನ ಏಕಾಗ್ರ ಚಿತ್ತತೆ ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸುವಲ್ಲಿ ಹಲಾಸನ ಅಥವಾ ನೇಗಿಲಿನ ಭಂಗಿಯೂ ಕೂಡಾ ಸೇರಿದೆ. ಈ ಅದ್ಭುತ ಭಂಗಿಯು ನೆನಪಿನ ಶಕ್ತಿಯನ್ನು ಸುಧಾರಿಸಲು ಮತ್ತು ಶಾಂತಿಗೊಳಿಸುವ ಮತ್ತು ವಿಶ್ರಾಂತಿಯನ್ನು ನೀಡುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಈ ಆಸನವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಅತಿಯಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಶಕ್ತಿ ಮತ್ತು ಜ್ಞಾಪಕ ಶಕ್ತಿಗೆ ಅತ್ಯಗತ್ಯ. ಇದು ನರಮಂಡಲದೊಂದಿಗೆ ಸಮನ್ವಯಗೊಳಿಸಲು ಮತ್ತು ಮೆದುಳಿಗೆ ರಕ್ತಪರಿಚಲನೆಯನ್ನು ಸುಧಾರಿಸಲು ಉತ್ತಮವಾದ ಒಂದು ಆಸನವಾಗಿದೆ.
ವೃಕ್ಷಾಸನ:-
ವೃಕ್ಷಾಸನ ಅಥವಾ ಮರದ ಭಂಗಿ, ಏಕಾಗ್ರತೆಯನ್ನು ಉತ್ತೇಜಿಸುವಲ್ಲಿ ಈ ಭಂಗಿ ಅತ್ಯಂತ ಪರಿಣಾಮಕಾರಿಯಾದುದಾಗಿದೆ. ಮನಸ್ಸಿನ ಮುಕ್ತತೆ ಮತ್ತು ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ.
ಒಂದು ಕಾಲಿನ ಮೂಲಕ ನಿಮ್ಮನ್ನು ಸಮತೋಲಗೊಳಿಸಿ, ನಂತರ ಮುಂಭಾಗದಲ್ಲಿರುವ ಒಂದು ಬಿಂದುವಿನ ಮೇಲೇ ನಿಮ್ಮ ಚಿತ್ತವಿರಿಸಿ, ಈ ಭಂಗಿಯು ಮೆದುಳು ಮತ್ತು ಮಾನಸಿಕ ಸ್ಥರತೆಯನ್ನು ಸುಧಾರಿಸುತ್ತದೆ.
ಬಾಲಾಸನ:-
ಪುಟ್ಟ ಮಗುವಿನಂತೆ ಏಕಾಗ್ರತೆಯನ್ನು ಪಡೆಯಲು ಬಾಲಾಸನ ಅತ್ಯಂತ ಪರಿಣಾಮಕಾರಿಯಾದ ಆಸನವಾಗಿದೆ. ಈ ಆಸನದಲ್ಲಿ ಮೃದುವಾಗಿ ಮತ್ತು ಸ್ವಲ್ಪ ಬೆನ್ನನ್ನು ಭಾಗಿಸುವುದರಿಂದ ಕೆಳಬೆನ್ನು ಮತ್ತು ಸೊಂಟದಲ್ಲಿ ಒತ್ತಡ ಬಿಡುಗಡೆಗೆ ಸಹಾಯ ಮಾಡುತ್ತದೆ.
ಭ್ರಾಮರಿಯೆಂಬ ಪ್ರಾಣಾಯಾಮ:-
ಭ್ರಾಮರಿ ಪ್ರಾಣಾಯಮವು ಮನಸ್ಸನ್ನು ಶಾಂತಗೊಳಿಸಲು ಸ್ಮರಣಾ ಶಕ್ತಿಯನ್ನು ಸುಧಾರಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುವಂತಹ ಸರಳವಾದ ಉಸಿರಾಟದಂತಹ ಒಂದು ತಂತ್ರವಾಗಿದೆ.
ಇದರಲ್ಲಿ ಆಳವಾದ ಉಸಿರನ್ನು ಒಳಗೆ ತೆಗೆದುಕೊಂಡು ನಂತರ ನಿಧಾನವಾಗಿ ಜೇನುನೊಣದಂತೆ ಗುನುಗುವ ಶಬ್ಧವನ್ನು ಮಾಡುತ್ತಾ ಉಸಿರನ್ನು ಬಿಡುವ ಸರಳ ಕ್ರಿಯೆಯಾಗಿದೆ. ಈ ಶಬ್ದವು ಹಿತವಾದ ಕಂಪನದ ಜೊತೆಗೆ ನರಮಂಡಲವನ್ನು ವಿಶ್ರಾಂತಗೊಳಿಸುತ್ತಾ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸಮತೋಲನಗೊಳಿಸುತ್ತದೆ.
ಶವಾಸನ:-
ಯೋಗಭ್ಯಾಸ ಕೊನೆಯ ಅಥವಾ ಅಂತ್ಯದ ಒಂದು ಆಸನವಾಗಿದೆ ಈ ಭಂಗಿಯು ಉತ್ತಮ ನಿದ್ರೆ ನೀಡುವುದು ಮತ್ತು ಆತಂಕ ಕಡಿಮೆಮಾಡುವುದು. ಮಾನಸಿಕ ಸ್ಥಿಮಿತತೆಗೆ ಒಂದು ಮುಖ್ಯವಾದ ಆಸನ ಇದಾಗಿದೆ.ಈ ನಮ್ಮ ಜೀವನ ಸಾರ್ಥಕತೆಗೆ ಮತ್ತು ಸಾಧನೆಗೆ ಯೋಗಭ್ಯಾಸವು ಒಂದು ಪ್ರಮುಖವಾದುದು. ಇಂದಿನ ದಿನಗಳಲ್ಲಿ ಆರೋಗ್ಯವೇ ನಮ್ಮ ಭಾಗ್ಯವಾಗಿದೆ. ಹೀಗಿದ್ದಾಗ ಯೋಗಭ್ಯಾಸವು ಒಂದು ಉತ್ತಮ ಗುರುಗಳೊಂದಿಗೆ ಪ್ರಾರಂಭಿಸಿ ನಿತ್ಯಾ ನಮ್ಮ ಜೀವನ
ದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.ಈ ಲೇಖನವು ಕೇವಲ ಒಂದು ಉತ್ತಮ ಮಾಹಿತಿಗೆ ನೀಡಲಾಗಿದೆ. ಒಂದು ಗುರುಗಳ ಮೂಲಕ ಯೋಗಭ್ಯಾಸ ಮಾಡಿದರೆ ಒಳಿತು.
ಯೋಗವೇ ಜೀವನ.

ವೀಣಾ ರವಿಕುಮಾರ್, ಬೆಂಗಳೂರು