- ಸಿಎಂ ಸಿದ್ದರಾಮಯ್ಯನವರು ತಲಾ ₹5 ಲಕ್ಷ ಪರಿಹಾರ ಘೋಷಣೆ
ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಅರ್ಕೇಶ್ವರ ದೇವಸ್ಥಾನದ ಸಮೀಪ ಹರಿಯುವ ಕಾವೇರಿ ನದಿಯಲ್ಲಿ ಈಜಲು ಇಳಿದ ಆರು ಮಂದಿ ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಬೆಂಗಳೂರಿನ ಐಮನ್ (13), ಯಾಸಿನ್ (23), ನೇಹಾನ್ (22), ತಮಿಳುನಾಡಿನ ಊಟಿಯ ಫಾತಿಮಾ (30), ಉಮೆರ್ (07) ಮತ್ತು ಕೆ.ಆರ್.ನಗರದ ಕೆ. ಆಫೀಫ್ (13) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡ ಇಬ್ಬರನ್ನು ರಕ್ಷಿಸಿ ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉರುಸ್ ಹಿನ್ನೆಲೆ ಕೆ.ಆರ್.ನಗರಕ್ಕೆ ಬಂದಿದ್ದ ಈ ತಂಡ ನದಿಯಲ್ಲಿ ಈಜಲು ಇಳಿದಾಗ ಏಕಾಏಕಿ ನೀರಿನಲ್ಲಿ ಮುಳುಗಿದ ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಡಿ.ರವಿಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರ ಮಾಹಿತಿ ಪ್ರಕಾರ, ಒಟ್ಟು 8 ಮಂದಿ ನದಿಗೆ ಇಳಿದಿದ್ದು, ಅವರಲ್ಲಿ ಮೂವರು ಅಪ್ರಾಪ್ತರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತರಲ್ಲಿ ಒಬ್ಬರು ಊಟಿಯವರು ಹಾಗೂ ಉಳಿದವರು ಬೆಂಗಳೂರು ಮತ್ತು ಮೈಸೂರು ಮೂಲದವರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಇದನ್ನು ಓದಿ –ಕಾರಿನಲ್ಲಿ ವ್ಯಕ್ತಿ ಶವವಾಗಿ ಪತ್ತೆ: ಕೊಲೆ ಶಂಕೆ
ಈ ದುರ್ಘಟನೆಯ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ಧೈರ್ಯ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ. ಮಾನವೀಯ ಕಾಳಜಿಯಿಂದ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಎಂದು ಕೂಡ ಅವರು ಆಶಿಸಿದ್ದಾರೆ.








