ನವರಾತ್ರಿಯಲ್ಲಿ ನಡೆದ ನವ ದಿನದ (9) ಯುದ್ದದಲ್ಲಿ ದುಷ್ಟ ಸಂಹಾರ ಶಿಷ್ಟರ ರಕ್ಷಣೆಗೆ ನಿಂತ ದುರ್ಗಾದೇವಿಯ ಮತ್ತೊಂದು ಅಥವಾ ಎಂಟನೆಯ ದಿನದ ಅವತಾರವೆ ಮಹಾಗೌರಿ ಅವತಾರ. ಸೌಂದರ್ಯಕ್ಕೆ ಹೆಸರಾದಂತಹ ಪಾರ್ವತಿಯು ಯುವ ಮತ್ತು ಸೌಮ್ಯ ರೂಪತಾಳಿ ತನ್ನ ಭಕ್ತರ ಸಂಕಷ್ಟಗಳನ್ನು ನಿವಾರಿಸುವ ತಾಯಿಯ ವಾಹನ ಗೂಳಿ, ಅವಳ ಕೈ ಯಲ್ಲಿ ತ್ರಿಶೂಲ, ಡಮರು, ಅಭಯ ಮತ್ತು ವರ ಮುದ್ರೆಗಳನ್ನು ಹೊಂದಿದಾಳೆ.
ಶುದ್ಧತೆ ಮತ್ತು ಶಾಂತಿ ಪ್ರಿಯಳಾದ ಗೌರಿ ಬಿಳಿ ಬಟ್ಟೆ ಮತ್ತು ಆಭರಣಗಳನ್ನು ಧರಿಸಿರುತ್ತಾಳೆ.
ಮಹಾಗೌರಿಯು ಪಾರ್ವತಿಯ ದೈವಿಕ ರೂಪವಾಗಿದ್ದು ಶಿವನನ್ನು ಪತಿಯನ್ನಾಗಿ ಪಡೆಯಲು ಕಠಿಣ ತಪಸ್ಸು ಆಚರಿಸಿ ಪಡೆದಳು. ನಮ್ಮ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕೆಯನ್ನು ಬುಧಗ್ರಹದೊಂದಿಗೆ ಸಂಬಂಧಿಸಲಾಗುತ್ತದೆ. ಇದು ಬುದ್ಧಿ, ಸಂವಹನ, ತಾರ್ಕಿಕ ಚಿಂತನೆಗೆ ಪ್ರತಿನಿಧಿಸುತ್ತದೆ. ಇನ್ನೂ ದುರ್ಗಾದೇವಿಯ ಅಂಶವಾದ,
ಮಹಾಗೌರಿಯ ಮೂಲದ ಕಥೆ:- ಶುಂಭ ಮತ್ತು ನಿಶುಂಭ ಎಂಬ ರಾಕ್ಷಸರನ್ನು ಕನ್ಯೆ, ಅವಿವಾಹಿತ ರೂಪವಾದ ಪಾರ್ವತಿ ಮಾತ್ರ ಕೊಲ್ಲಬಹುದು. ಆದ್ದರಿಂದ ಬ್ರಹ್ಮನ ಸಲಹೆಯಂತೆ, ಶಿವನು ಪಾರ್ವತಿಯನ್ನು ಯಾವುದೇ ಕಾರಣವಿಲ್ಲದೆ “ಕಾಳಿ” ಎಂದು ಪದೇ ಪದೇ ಅಪಹಾಸ್ಯ ಮಾಡುವ ರೀತಿಯಲ್ಲಿ ಕರೆದನು. ಇದರಿಂದ ಸಿಟ್ಟಿಗೆದ್ದ ಪಾರ್ವತಿಯು ಬ್ರಹ್ಮನ ಕುರಿತು ಕಠಿಣ ತಪಸ್ಸು ಆಚರಿಸಲು ಬ್ರಹ್ಮನು ಅವಳಿಗೆ ವರವನ್ನು ನೀಡುವಾಗ ಅವಳ ಮೈಬಣ್ಣ ಚಿನ್ನದಂತೆ ಇರಬೇಕು ಎಂದು ಪ್ರಾರ್ಥಿಸಲು, ಆಗ ಬ್ರಹ್ಮ ದೇವರು ವರದ ಅಸಮರ್ಥತೆ ಬಗ್ಗೆ ವಿವರಿಸಿ ಮತ್ತು ಅವಳ ತಪಸ್ಸನ್ನು ನಿಲ್ಲಿಸಲು ತಿಳಿಸಿ ಲೋಕದ ಒಳತಿಗಾಗಿ ಆ ಇಬ್ಬರ ರಾಕ್ಷಸರ ಸಂಹಾರ ಮಾಡಲು ವಿನಂತಿಸಿದರು.
ಪಾರ್ವತಿ ದೇವಿಯು ಅದಕ್ಕೆ ಒಪ್ಪಿ ಹಿಮಾಲಯದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೋದಳು ಮತ್ತು ಅದರಲ್ಲಿ ಒಮ್ಮೆ ಮುಳುಗಿದ ನಂತರ ಅವಳ ಮೈಬಣ್ಣ ಕಪ್ಪು ಚರ್ಮದಿಂದ ನಿವಾರಣೆಗೊಂಡು ಹೊಂಬಣ್ಣ ಪಡೆದು ಅವಳು ಬಿಳಿ ಅಥವಾ ಶ್ವೇತವರ್ಣದ ವಸ್ತ್ರಧರಿಸಿ ಸುಂದರವಾದ ಸುಂದರ ಮಹಿಳೆಯಾಗಿ ಹೊರಬಂದಳು . ಆದ್ದರಿಂದ ಅವಳು ಮಹಾಗೌರಿಯಾದಳು .
ಶುಂಭ-ನಿಶುಂಭ ನಾಶಕ್ಕಾಗಿ ನಿಂತ ಇವಳಿಗೆ ದೇವತೆಗಳ ಪ್ರಾರ್ಥನೆಗೆ ಓ ಗೊಟ್ಟು ಇವರ ಸಂಹಾರಕ್ಕಾಗಿ ಮಹಾಕಾಳಿಯಾಗಿ ರೌದ್ರಾವತಾರ ತಾಳಿ ಸಂಹರಿಸುವಳು. ಹೀಗೆ ನವ ರಾತ್ರಿಗಳಲ್ಲೂ ಒಂದೊಂದು ಅವತಾರದಲ್ಲಿ ನಿಂತ ನವದುರ್ಗೆ ದುಷ್ಟ ಸಂಹಾರ ಮಾಡುವಳು. ಭೂ ಲೋಕದ ಉದ್ಧಾರಕ್ಕಾಗಿ ಬಂದ ತಾಯಿ ಮಹಾಗೌರಿಯಾಗಯೂ ನಿಲ್ಲುವಳು. ಮಾರ್ಕಂಡೇಯ ಪುರಾಣದಲ್ಲಿ, ಶಿವಪುರಾಣದಲ್ಲಿ ಅನೇಕ ನಾಮಗಳಿಂದ ಕರೆಯಲ್ಪಟ್ಟವಳು.
ತಾಯಿ ಗೌರಿಯು, ಶಕ್ತಿ ದೇವಿಯು ಆಗಿ ಎಲ್ಲರಿಗೂ ಮಂಗಳವನ್ನುಂಟು ಮಾಡುವ ಸಲುವಾಗಿ ಕೆಟ್ಟ ಕಾರ್ಯಗಳನ್ನು ಮಾಡುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ರಕ್ಷಿಸುವಳು, ತಾಯಿ ಮಹಾಗೌರಿ ಆಧ್ಯಾತ್ಮಿಕ ಅನ್ವೇಷಕರಿಗೆ ಜ್ಞಾನೋದಯವನ್ನು ನೀಡುತ್ತಾಳೆ ಮತ್ತು ಮೋಕ್ಷವನ್ನು ನೀಡುವ ಮೂಲಕ ಪುನರ್ಜನ್ಮದ ಭಯವನ್ನು ಹೋಗಲಾಡಿಸುವಳು. ಇವಳನ್ನು “ಓಂ ದೇವಿ ಮಹಾಗೌರಿ ನಮಃ” ಎಂದು ಮಂತ್ರವ ಪಠಿಸುವ ಮೂಲಕ ಪೂಜಿಸಬೇಕು. ಈ ಬ್ರಹ್ಮಾಂಡದ ಕಲ್ಯಾಣವೇ ಅವಳ ಮುಖ್ಯ ಗುರಿ ಮತ್ತು ಅತ್ಯಂತ ಸೌಂದರ್ಯವಂತೆಯಾದ ಮಹಾತಾಯಿ ಗೌರಿ ಶ್ವೇತಾಂಭರ ಧರೆ, ನಾನಾಲಂಕಾರ ಭೂ಼ಷಿತೆಯಾಗಿರುವಳು.
ಈ ತಾಯಿಯ ಮುದ್ರೆಯೇ ಅಭಯಮುದ್ರೆ.
ಕೃಷ್ಣಾರ್ಪಣಮಸ್ತು.

ವೀಣಾ ರವಿಕುಮಾರ್.








