ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ.
CWRC ಶಿಫಾರಸಿನ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ದೆಹಲಿಯಲ್ಲಿರುವ CWMA ಕಚೇರಿಯಲ್ಲಿ ಅಧ್ಯಕ್ಷ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ಬೆಳಗ್ಗೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಮಹೇಶ್ ಅವರು ಖುದ್ದಾಗಿ ಭಾಗವಹಿಸಿ, ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಹಾಗೂ ಪ್ರಸ್ತುತ ಜಲ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.
ತಮಿಳುನಾಡಿನ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿರುವ ಮಳೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ CWRC ಈ ಶಿಫಾರಸು ಮಾಡಿದೆ.
ಆಗಸ್ಟ್ 10ರವರೆಗಿನ ವರದಿಯ ಪ್ರಕಾರ, ತಮಿಳುನಾಡು ಗಡಿಯ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಈಗಾಗಲೇ ಸುಮಾರು 9 ಟಿಎಂಸಿ ನೀರು ಹರಿದುಹೋಗಿರುವುದು ದಾಖಲಾಗಿದೆ.
CWRC ಶಿಫಾರಸಿನಂತೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸಿದರೆ, ತಮಿಳುನಾಡಿಗೆ ಹರಿಯುವ ಒಟ್ಟು ನೀರಿನ ಪ್ರಮಾಣ ಸುಮಾರು 16 ಟಿಎಂಸಿಗೆ ತಲುಪಲಿದೆ ಎನ್ನಲಾಗಿದೆ.ಇದನ್ನು ಓದಿ –ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ
ಇದೀಗ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ CWMA ಸಭೆಯತ್ತ ಎಲ್ಲರ ಗಮನ ನೆಟ್ಟಿದೆ. CWRC ಮಾಡಿರುವ ಶಿಫಾರಸನ್ನು ಪ್ರಾಧಿಕಾರ ಎಷ್ಟರ ಮಟ್ಟಿಗೆ ಅಂಗೀಕರಿಸಲಿದೆ ಹಾಗೂ ರಾಜ್ಯದ ಹಿತಾಸಕ್ತಿ ಕಾಪಾಡಲು ಕರ್ನಾಟಕ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.








