ಬೆಳಗಾವಿ: ಬೆಳಗಾವಿ ತಾಲೂಕಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ದಾರುಣ ಸಾವಿಗೆ ಹೆಚ್‌ಎಸ್ (ಹೆಮೊರೆಜಿಕ್ ಸೆಪ್ಟಿಸೆಮಿಯಾ) ಬ್ಯಾಕ್ಟೀರಿಯಾ ಕಾರಣವೆಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸಾಂಕ್ರಾಮಿಕ ರೋಗದ ಪರಿಣಾಮ ಈ ಘಟನೆ ನಡೆದಿದೆ ಎಂದು ಮೃಗಾಲಯದ ಎಸಿಎಫ್ ನಾಗರಾಜ್ ಬಾಳೆಹೊಸೂರ್
ಹೇಳಿದರು.
ಅಕ್ಟೋಬರ್ 13ರಿಂದ 16ರ ನಡುವೆ ಒಟ್ಟಾರೆ 31 ಕೃಷ್ಣಮೃಗಗಳು ಅಚಾನಕ್ ಸಾವಿಗೀಡಾಗಿದ್ದವು. ಘಟನೆಗೆ ಕಾರಣ ಪತ್ತೆಹಚ್ಚಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ತಜ್ಞರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವೈರಾಣು ತಜ್ಞ ಡಾ. ಚಂದ್ರಶೇಖರ್ ಅವರು ವರದಿ ಬಿಡುಗಡೆ ಮಾಡಿದ್ದು, ಕೃಷ್ಣಮೃಗಗಳ ಸಾವಿಗೆ HS ಬ್ಯಾಕ್ಟೀರಿಯಾ ನೇರ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿಯಲ್ಲಿ ಹಠಾತ್ ತಾಪಮಾನ ಕುಸಿತ ಮತ್ತು ಒತ್ತಡ (ಸ್ಟ್ರೆಸ್) ಕೂಡ ಸಾವಿನಲ್ಲೊಂದು ಪಾರ್ಶ್ವಕಾರಣವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.
ಸಾವು ಸಂಭವಿಸಿದ ನಂತರ ಉಳಿದ ಕೃಷ್ಣಮೃಗಗಳ ಆರೋಗ್ಯ ಸ್ಥಿತಿ ಪರಿಶೀಲನೆ ನಡೆಯಿತು. ಪ್ರಸ್ತುತ ಬದುಕುಳಿದ ಏಳು ಕೃಷ್ಣಮೃಗಗಳಿಗೆ ತೀವ್ರ ನಿಗಾದಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ವ್ಯಾಪಕತೆ ತಡೆಯುವ ಪ್ರಯತ್ನವಾಗಿ ಮೃಗಾಲಯದೊಳಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಈಗ ಹುಲಿ, ಸಿಂಹ, ಚಿರತೆ, ಕತ್ತೆಕಿರುಬ, ಕರಡಿ ಹಾಗೂ ವಿವಿಧ ಜಿಂಕೆ ಪ್ರಭೇದಗಳಿರುವುದರಿಂದ ಯಾವುದೇ ರೋಗ ಹರಡುವಿಕೆ ಸಂಭವಿಸದಂತೆ ತುರ್ತು ಪ್ರೋಟೋಕಾಲ್ ಜಾರಿಗೆ ತರುವಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.








