ಅಯೋಧ್ಯೆ: ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ವಕಾಲತ್ತು ವಹಿಸದಿರಲು ಅಯೋಧ್ಯೆಯ ವಕೀಲರು ನಿರ್ಧರಿಸಿದ್ದಾರೆ.
ಈ ಕುರಿತು ಅಂತಿಮ ತೀರ್ಮಾನವನ್ನು ಇಂದು (ಜೂನ್ 29) ನಡೆಯಲಿರುವ ಫೈಜಾಬಾದ್ ಬಾರ್ ಅಸೋಸಿಯೇಷನ್‌ನ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷೆ ಕಾಳಿಕಾ ಮಿಶ್ರಾ ತಿಳಿಸಿದ್ದಾರೆ.
ದೇವಾಲಯದ ದೇಣಿಗೆ ದುರುಪಯೋಗ ಪ್ರಕರಣವು ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ವಕೀಲ ವಿವೇಕ್ ಕುಮಾರ್ ಸಿಂಗ್, “ದೇವಾಲಯದ ದೇಣಿಗೆಯ ದುರುಪಯೋಗ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ. ಫೈಜಾಬಾದ್‌ನ ವಕೀಲರು ಆರೋಪಿಗಳ ಪರವಾಗಿ ವಾದಿಸದಿರಲು ಒಮ್ಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾರ್ ಅಸೋಸಿಯೇಷನ್‌ನ ಸಾಮಾನ್ಯ ಸಭೆಯಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಳಿಕ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು” ಎಂದು ತಿಳಿಸಿದ್ದಾರೆ.
ಹಿರಿಯ ವಕೀಲ ರಾಜೇಂದ್ರ ಚೌಧರಿ, “ಕೆಲವರ ಕೃತ್ಯದಿಂದ ಇಡೀ ಅಯೋಧ್ಯೆಗೆ ಕೆಟ್ಟ ಹೆಸರು ಬಂದಿದೆ. ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಬುಲ್ಡೋಜರ್ ನೀತಿಯನ್ನೂ ಅನುಸರಿಸಬೇಕು” ಎಂದು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಂಟು ಆರೋಪಿಗಳ ನಿವಾಸಗಳ ಮೇಲೆ ಭಾನುವಾರ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ನಿರ್ಧಾರ
2005ರಲ್ಲಿ ರಾಮ ಮಂದಿರದ ಸಮೀಪ ನಡೆದ ಬಾಂಬ್ ದಾಳಿ ಪ್ರಕರಣದ ಆರೋಪಿಗಳನ್ನು ಫೈಜಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಕೂಡ ಸ್ಥಳೀಯ ವಕೀಲರು ಅವರ ಪರವಾಗಿ ವಕಾಲತ್ತು ವಹಿಸದಿರಲು ನಿರ್ಧಾರ ಕೈಗೊಂಡಿದ್ದರು.








