ಬೆಳಗಾವಿ: ಬಹುಕಾಲದಿಂದ ಸ್ಥಗಿತಗೊಂಡಿದ್ದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮತ್ತೊಮ್ಮೆ ಚೈತನ್ಯ ಸಿಕ್ಕಿದೆ. ಸಂಪುಟ ಸಭೆಯಲ್ಲಿ, ಚುನಾವಣಾ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್ ಒಳಗೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಈ ಮೂಲಕ ಸುಮಾರು ಐದು ವರ್ಷಗಳಿಂದ ವಿಳಂಬಗೊಂಡಿದ್ದ ಜಿಪಂ–ತಾಪಂ ಚುನಾವಣೆಗಳು 2026ರ ಬೇಸಿಗೆಗೂ ಮುನ್ನ ನಡೆಯುವ ದಾರಿ ಸುಗಮಗೊಂಡಿದೆ.
ರಾಜ್ಯದಲ್ಲಿ ಕೊನೆಯ ಬಾರಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ 2016ರ ಏಪ್ರಿಲ್‌ನಲ್ಲಿ ನಡೆದಿತ್ತು. ಆಗ ಆಯ್ಕೆಯಾದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಗಿದಿತ್ತು. ಆದಾಗ್ಯೂ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಚುನಾವಣೆ ನಡೆಯದೇ, ಸ್ಥಳೀಯ ಸ್ವರಾಜ್ಯ ವ್ಯವಸ್ಥೆ ಐದು ವರ್ಷಗಳ ಕಾಲ ಕಾರ್ಯನಿರ್ವಹಣೆಯಲ್ಲಿಯೇ ಉಳಿದಿದೆ.
ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಕ್ಷೇತ್ರ ಪುನರ್‌ವಿಂಗಡಣೆ, ಮತದಾರರ ಅಂತಿಮ ಪಟ್ಟಿಗಳು ಮತ್ತು ಮೀಸಲಾತಿ ಕರಡುವನ್ನು ಪ್ರಕಟಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ, ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು, ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ವರ್ಗಾಯಿಸಿತ್ತು. ಇದರಿಂದಾಗಿ ಚುನಾವಣಾ ಸಿದ್ಧತೆಗಳು ಮತ್ತಷ್ಟು ವಿಳಂಬಕ್ಕೆ ಒಳಗಾದವು.
ಈ ನಿರ್ಧಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಗಿತ್ತು. ಸರ್ಕಾರವು ಹೈಕೋರ್ಟ್‌ಗೆ 2023ರ ಡಿಸೆಂಬರ್‌ನಲ್ಲೇ “ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ” ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿ ಕುರಿತ ಅಧಿಸೂಚನೆ ಹೊರಡಿಸಿತ್ತು. ಆದರೆ ಮೀಸಲಾತಿಯ ಅಂತಿಮ ಪ್ರಕಟಣೆ ಆಗದೆ ಉಳಿದಿತ್ತು.
ಈಗ ಸಂಪುಟದ ತಾಜಾ ನಿರ್ಧಾರದಿಂದ, ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚುನಾವಣೆಗಳು 2026ರೊಳಗೆ ನಡೆಯುವುದು ಬಹುತೇಕ ಖಚಿತವಾಗಿದೆ.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
- ಅಥಣಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ.
- ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗಾಗಿ ₹94.38 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ:
- 268 ಹೊಸ ತರಗತಿ ಕೊಠಡಿಗಳು
- 123 ಶೌಚಾಲಯ ಬ್ಲಾಕ್‌ಗಳು
- 264 ತರಗತಿಗಳ ದುರಸ್ತಿ
- ಜಿಲ್ಲಾ–ತಾಲ್ಲೂಕು ಮಟ್ಟದ ಪ್ರಜಾಸೌಧಗಳ ನಿರ್ಮಾಣಕ್ಕೆ ಅನುಮೋದನೆ:
- ಬೆಳಗಾವಿಯಲ್ಲಿ ₹55 ಕೋಟಿಗೆ ಜಿಲ್ಲಾ ಪ್ರಜಾಸೌಧ
- ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನಲ್ಲಿ ₹10.85 ಕೋಟಿ ವೆಚ್ಚದ ತಾಲ್ಲೂಕು ಪ್ರಜಾಸೌಧ
- ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ₹10.80 ಕೋಟಿ ವೆಚ್ಚದ ತಾಲ್ಲೂಕು ಪ್ರಜಾಸೌಧ
- ವಿಧಾನಮಂಡಲದಲ್ಲಿ ಎರಡು ಮಹತ್ವದ ಮಸೂದೆಗಳನ್ನು ಮಂಡಿಸಲು ಅನುಮತಿ:
- ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ
- ಬಾಂಬೆ ಸಾರ್ವಜನಿಕ ನ್ಯಾಸ ಮಸೂದೆ
- ನಾಡಪ್ರಭು ಕೆಂಪೇಗೌಡ ಪಾರಂಪರಿಕ ಮಸೂದೆ








