ಬೆಂಗಳೂರು: ವಿ.ಬಿ–ಜಿ ರಾಮ್ ಜಿ ಕಾಯ್ದೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಹೊಸ ಕಾಯ್ದೆಯು ಉದ್ಯೋಗ ಖಾತರಿ ಎಂಬ ಮೂಲ ತತ್ವವನ್ನೇ ದುರ್ಬಲಗೊಳಿಸುತ್ತಿದ್ದು, ರಾಜ್ಯಗಳ ಆರ್ಥಿಕತೆಗೆ ಹೆಚ್ಚುವರಿ ಹೊರೆ ಉಂಟುಮಾಡುತ್ತದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.90 ಹಾಗೂ ರಾಜ್ಯದ ಪಾಲು ಶೇ.10 ಆಗಿತ್ತು. ಆದರೆ, ಹೊಸ ಕಾಯ್ದೆಯಡಿ ಆ ಹೊಣೆಗಾರಿಕೆ ರಾಜ್ಯಗಳ ಮೇಲೆ ಹೆಚ್ಚಾಗಿ ಬೀಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.ಇದನ್ನು ಓದಿ – ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಇದಲ್ಲದೆ, ಈ ಕಾಯ್ದೆ ಸಂವಿಧಾನದ 258 ಮತ್ತು 250ನೇ ವಿಧಿಗಳ ಉಲ್ಲಂಘನೆಯಾಗಿದ್ದು, ರಾಜ್ಯಗಳೊಂದಿಗೆ ಸಮರ್ಪಕ ಚರ್ಚೆ ನಡೆಸದೇ ಜಾರಿಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ. ಇಂತಹ ಕ್ರಮಗಳು ಸಹಕಾರಿ ಒಕ್ಕೂಟದ ಆತ್ಮಕ್ಕೆ ಧಕ್ಕೆ ತರುವಂತಿವೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ವಿ.ಬಿ–ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣ ಸ್ಥಗಿತಗೊಳಿಸಿ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸಮೃದ್ಧ ಭಾರತ ನಿರ್ಮಾಣಕ್ಕೆ ಪೂರಕವಾದ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.








