ದಾವಣಗೆರೆ : ಜಿಲ್ಲೆಯ ಆನಗೋಡು ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಬೆಳಗಾವಿಯ ಕಿರು ಮೃಗಾಲಯದಲ್ಲಿ 25ಕ್ಕೂ ಹೆಚ್ಚು ಕೃಷ್ಣಮೃಗಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಘಟನೆ ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಅದೇ ರೀತಿಯ ಘಟನೆ ದಾವಣಗೆರೆಯ ಕಿರು ಮೃಗಾಲಯದಲ್ಲೂ ಸಂಭವಿಸಿರುವುದು ಚಿಂತೆಗೆ ಕಾರಣವಾಗಿದೆ.
ಕಳೆದ ಮೂರೇ ದಿನಗಳಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ್ದು, ಮೃಗಾಲಯದಲ್ಲಿ ಹೆಮರಾಜಿಕ್ ಸೆಪ್ಟಿಸೀಮಿಯಾ ಎಂಬ ಸಾಂಕ್ರಾಮಿಕ ರೋಗ ಹರಡಿರುವ ಸಾಧ್ಯತೆ ಇದೆ ಎಂದು ಪಶುವೈದ್ಯರು ಶಂಕಿಸಿದ್ದಾರೆ. ಮೃಗಾಲಯದಲ್ಲಿ ಸದ್ಯ ಸುಮಾರು 170 ಚುಕ್ಕಿ ಜಿಂಕೆಗಳು ಇದ್ದು, ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತಕ್ಷಣವೇ ರೋಗನಿರೋಧಕ ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ಚಿಕಿತ್ಸೆ ಮುಂದುವರಿದಿರುವ ಹಿನ್ನೆಲೆ, ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಮೃಗಾಲಯವನ್ನು ತಾತ್ಕಾಲಿಕವಾಗಿ ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲು ನಿರ್ಧರಿಸಿದ್ದಾರೆ.ಇದನ್ನು ಓದಿ –ಸಚಿವ ಆರ್.ಬಿ. ತಿಮ್ಮಾಪುರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಘಟನೆಯ ಕುರಿತು ಅರಣ್ಯ ಇಲಾಖೆ ಹಾಗೂ ಪಶುವೈದ್ಯಕೀಯ ತಂಡಗಳು ನಿಗಾ ವಹಿಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.








